ಇಂಡಿ

ಡಿ.12ರ ಒಳಗಾಗಿ ಮೀಸಲಾತಿ ಘೋಷಿಸಿ: ಶಾಸಕ ಯತ್ನಾಳ ಎಚ್ಚರಿಕೆ

ಡಿ.12ರ ಒಳಗಾಗಿ ಮೀಸಲಾತಿ ಘೋಷಿಸಿ: ಶಾಸಕ ಯತ್ನಾಳ ಎಚ್ಚರಿಕೆ
ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ

ಇಂಡಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಸರಕಾರ ಇದುವರೆಗೂ ಮೀಸಲಾತಿ ನೀಡಿಲ್ಲ. ಡಿ.12 ರ ಒಳಗಾಗಿ ಮೀಸಲಾತಿ ಘೋಷಿಸಬೇಕು. ಕೊಡೋಣ, ನೋಡೋಣ ಎಂದರೆ ನಮ್ಮ ಜನ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ದರಾಗಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.

ಅವರು ಸೋಮವಾರ ಪಟ್ಟಣದ ಧನಶೆಟ್ಟಿ ಮಂಗಲ ಕಾಯಾಲಯದ ಹತ್ತಿರ ನಡೆದ ಲಿಂಗಾಯತ ಪಂಚಮಸಾಲಿ ಸಮಾವೇಶ ಮತ್ತು ಗಡಿನಾಡು ಲಿಂಗಾಯತ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯಿಸಿ ಹಾಗೂ ರಾಷ್ಟ್ರಮಾತೆ ಕಿತ್ತೂರ ಚೆನ್ನಮ್ಮನವರ 244 ನೇ ಜಯಂತ್ಯೋತ್ಸವ ಮತ್ತು 199 ನೇ ವಿಜಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

ಈ ಕುರಿತು ಆಯೋಗದವರು ಸವರ್ೇ ಕಾರ್ಯವನ್ನು ತಡ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಆಯೋಗದವರಿಗೆ ಸೂಚಿಸಿ ಬೇಗ ವರದಿ ತರಿಸಿಕೊಳ್ಳಬೇಕು. ಆಯೋಗದ ಹೆಸರು ಹೇಳಿಕೊಂಡು ನೆಪ ಒಡ್ಡಿದರೆ ಸರಕಾರ ಸಮಾಜದವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದರು.

ಡಿ. 12 ರವರೆಗೆ ಸರಕಾರಕ್ಕೆ ಗಡುವು ನೀಡುತ್ತಿದ್ದು ಸರಕಾರ ಸ್ಪಂದಿಸದಿದ್ದರೆ ಡಿ. 12 ರಂದು ಮಾಡು ಇಲ್ಲವೆ ಮಡಿ ಹೋರಾಟ ನಡೆಸಲಾಗುವದು ಎಂದ ಅವರು ಕುರುಬ ಸಮಾಜ, ತಳವಾರ ಸಮಾಜ, ವಾಲ್ಮೀಕಿ ಸಮುದಾಯ, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಬೇಕು ಎಂದು ವಿಧಾನಸಭೆಯಲ್ಲಿ ನಾನು ಧ್ವನಿಎತ್ತಿದ್ದೇನೆ. ನಾನು ಕೇವಲ ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡಿಲ್ಲ. ನಮ್ಮ ಸಮಾಜಕ್ಕಷ್ಟೇ ಮೀಸಲಾತಿ ಕೇಳಿಲ್ಲ. ಇದ್ದುದ್ದರಲ್ಲಿಯೇ ಎಲ್ಲರೂ ಹಂಚಿಕೊಂಡು ತಿನ್ನಬೇಕು ಎನ್ನುವವರು ನಾವು ಎಂದರು. 

ಸಮಾಜದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 10 ಲಕ್ಷ ಸಮಾಜ ಬಾಂಧವರನ್ನು ಸೇರಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದರೂ ಸರಕಾರಕ್ಕೆ ಕಿವಿ ಕೇಳಿಸಲಿಲ್ಲ. ಮುಖ್ಯಮಂತ್ರಿ ನಿವಾಸದ ಎದುರು ಹೋರಾಟ ಮಾಡಿದರೂ ಮೀಸಲಾತಿ ಕೊಡಲಿಲ್ಲ. ಈಗ ನಾಲ್ಕು ಹಂತಗಳಲ್ಲಿ ಹೋರಾಟ ಮಾಡಿದ್ದು ಕೊನೆಯ ಹೋರಾಟವಾಗಿ ಬೆಂಗಳೂರಿನಲ್ಲಿ 25 ಲಕ್ಷ ಜನರನ್ನು ಸೇರಿಸಿ ಪಂಚಮಸಾಲಿ ನಡಿಗೆ ವಿಧಾನಸೌಧ ಕಡೆಗೆ ಹೋರಾಟ ಮಾಡಲಾಗುವದು ಎಂದರು. 

ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಮೀಸಲಾತಿ ಸಿಗುವವರೆಗೂ ನಾವು ವಿರಮಿಸುವದಿಲ್ಲ. ನಮ್ಮ ಸಹನೆ ಪರೀಕ್ಷೆ ಮಾಡಬೇಡಿ. ಪಂಚಮಸಾಲಿ ಮೀಸಲಾತಿ ಕುರಿತು  ಸವರ್ೇ ಕಾರ್ಯ ನಡೆದಿದ್ದು ಕೂಡಲೇ ಮುಗಿಸಿ 2ಎ ಮೀಸಲಾತಿ ನೀಡಲು ಕೇಳಿಕೊಂಡರು. ಪ್ರಾಣ ಕೊಟ್ಟೇವು. ಮೀಸಲಾತಿ ಬಿಡುವದಿಲ್ಲ. ಕಿತ್ತೂರ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಎಂದ ಅವರು ಅವರಂತೆ ದೇಶಪ್ರೇಮ ಬೆಳೆಸಿಕೊಳ್ಳಲು ಕೇಳಿಕೊಂಡರು.  

ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ 2ಎ ಮೀಸಲಾತಿ ಕೊಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆ. ಸುಪ್ರೀಂ ಕೋರ್ಟ ಆದೇಶದಂತೆ ಮೀಸಲಾತಿ ಪ್ರಮಾಣ 50 ಪ್ರತಿಶತ ಮೀರಬಾರದು. ನಾವು ಮೀಸಲಾತಿ ಹೆಚ್ಚಿಸುವಂತೆ ಹೋರಾಟ ಮಾಡುತ್ತಿಲ್ಲ ಕೇವಲ ಮೀಸಲಾತಿಯ ವರ್ಗ ಬದಲಾಯಿಸಬೇಕಾಗಿದೆ. ಆದರೆ ಮುಖ್ಯಮಂತ್ರಿಗಳು ನಮ್ಮ ಸಮಾಜಕ್ಕೆ ಮೀಸಲಾತಿ ನೀಡಲು ಹಿಂದೇಟು ಹಾಕುತ್ತಿರುವುದು ನಮ್ಮ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಮಾಜಿ ಶಾಸಕ ರವಿಕಾಂತ ಪಾಟೀಲ, ಜಿಲ್ಲಾ ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜಿ.ಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ,ಎಸ್.ಎ.ಪಾಟೀಲ ಡೊಮನಾಳ, ಸೋಮು ದೇವರ, ಧನರಾಜ ಮುಜಗೊಂಡ, ವೈ.ಜಿ.ಬಿರಾದಾರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬಾಳು ಮುಳಜಿ ಮಾತನಾಡಿ ಮೀಸಲಾತಿ ನೀಡಬೇಕು. ಇಲ್ಲವಾದರೆ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ಸಮುದಾಯ ಪಾಠ ಕಲಿಸಬೇಕಾಗುತ್ತದೆ ಎಂದರು.

ಇದೇ ವೇಳೆ ಸಮಾಜದ ಸಮೃದ್ಧಿ ತೋಳನೂರ, ಶ್ರೀಮಂತ ಇಂಡಿ, ಈರಣ್ಣ ಕುದರಿ ಶಿವು ಮರಬದ, ಮಹಾವೀರ ಧನಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. 

ವೇದಿಕೆಯ ಮೇಲೆ ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಇಂಡಿ ತಾಲೂಕಾ ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ವಿ.ಎಚ್.ಬಿರಾದಾರ, ತಾ.ಪಂ ಮಾಜಿ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಶ್ರೀಮಂತ ಬಾರಿಕಾಯಿ, ಮಹಿಳಾ ಘಟಕದ ಶಶಿಕಲಾ ಬೇಟಗೇರಿ ಶಂಕರಗೌಡ ಬಿರಾದಾರ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ನಗರದ ಮಹಾವೀರ ವೃತ್ತದಿಂದ ರಾಣಿ ಚನ್ನಮ್ಮನವರ ಭಾವಚಿತ್ರ ಮತ್ತು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ತೆರೆದ ವಾಹನದಲ್ಲಿ ವಿವಿಧ ವಾಧ್ಯ ವೃಂದಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ತರಲಾಯಿತು.  



ಸುದ್ದಿ ಓದಿ