ಮೂಗು ಮುಚ್ಚಿಕೊಂಡೇ ಬಸ್ ನಿಲ್ದಾಣಕ್ಕೆ ಬನ್ನಿ!
ಇಂಡಿ: ಶೌಚಾಲಯದ ನೀರು ಬಸ್ ನಿಲ್ದಾಣದ ಆವರಣದಲ್ಲೇ ಬಂದು ನಿಲ್ಲುತ್ತಿರುವುದರಿಂದ ಬಸ್‌್ ನಿಲ್ದಾಣವೆಲ್ಲ ಗಬ್ಬೆದ್ದು ವಾಸನೆ ಬೀರುತ್ತಿದೆ. ಶೌಚಾಲಯದಿಂದ ಶೌಚನೀರು ಬಸ್ ನಿಲ್ದಾಣದ ಆವರಣದಲ್ಲಿ ಬಂದು ನಿಲ್ಲುತ್ತಿದ್ದು, ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ.
ಪ್ರತಿದಿನ ಗ್ರಾಮೀಣ ಭಾಗದಿಂದ ಸಾವಿರಾರು ಜನ ಬಸ್ ಮೂಲಕ ಪಟ್ಟಣಕ್ಕೆ ಬಂದು ಬಸ್ ನಿಲ್ದಾಣದಲ್ಲಿ ಇಳಿದು ತಮ್ಮ ಕಾರ್ಯಗಳನ್ನು ಮುಗಿಸಿ ಮತ್ತೆ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದಲೇ ತಮ್ಮ ತಮ್ಮ ಗ್ರಾಮಗಳಿಗೆ ಹೋಗುತ್ತಾರೆ. ಆದರೆ ಈಗ ಬಸ್ ನಿಲ್ದಾಣಕ್ಕೆ ಬಂದರೆ ಮೂಗು ಮುಚ್ಚಿಕೊಂಡೆ ನಿಲ್ಲಬೇಕಾದ ಮತ್ತು ಕೂರಬೇಕಾದ ಅನಿವಾರ್ಯತೆ ಎದುರಾಗಿದೆ.
ಶೌಚಾಲಯ ಪಕ್ಕದಲ್ಲಿಯೇ ಬಸ್ ನಿಲ್ದಾಣದ ಆವರಣದಲ್ಲಿಯೇ ಶೌಚನೀರು ನಿಲ್ಲುತ್ತಿದ್ದು ಅಲ್ಲಿ ಸಾಕಷ್ಟು ಸೊಳ್ಳೆಗಳು ಸಹ ಉತ್ಪತ್ತಿಯಾಗಿವೆ. ಅಲ್ಲದೆ ಅಲ್ಲಿ ಶೌಚ ನೀರು ನಿಂತಿರುವುದರಿಂದ ಶೌಚಾಲಯ ಒಳಗಡೆ ಹೋಗಲು ಆ ಕೊಳೆ ನೀರಿನಲ್ಲೇ ಕಾಲಿಟ್ಟು ಹೋಗಬೇಕಾಗಿದೆ.
ಇಷ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯದ ಸಿಬ್ಬಂದಿಗೆ ಹೇಳಿ ಅದನ್ನು ಸಚಿವಳಿಸುವ ಕಾರ್ಯ ಮಾಡಿಲ್ಲ ಬಸ್ ನಿಲ್ದಾಣದ ಅಧಿಕಾರಿಗಳ ಬೇ ಜವಾಬ್ದಾರಿತನಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನಷ್ಟು ದಿನ ಬಿಟ್ಟರೆ ಬಸ್ ನಿಲ್ದಾಣಕ್ಕೆ ಬರುವ ಎಲ್ಲರಿಗೂ ರೋಗ ರುಜಿನಗಳು ಅಂಟಿಕೊಳ್ಳುವುದು ಪಕ್ಕ್ಕಾ ಆದಂತಾಗಿದೆ. ನಿಲ್ದಾಣದ ಆವರಣದಲ್ಲಿ ನಿಲ್ಲುವ ಶೌಚ ನೀರನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಗ್ರಾಮಾಂತರ ಭಾಗದ ಜನ ಆಗ್ರಹಿಸಿದ್ದಾರೆ.
ಕಳೆದ ಒಂದು ವಾರಕ್ಕಿಂತ ಹೆಚ್ಚಿನ ದಿನಗಳಿಂದ ನಿಲ್ದಾಣದ ಶೌಚಾಲಯದ ಪಕ್ಕದಲ್ಲಿಯೇ ಶೌಚನೀರು ಸಂಗ್ರಹವಾಗುತ್ತಿದೆ. ಹೀಗಾಗಿ ಗಬ್ಬು ವಾಸನೆ ಬೀರುತ್ತಿದೆ. ಸಂಬಂಧಪಟ್ಟವರು ಯಾರು ಸ್ವಚ್ಛತೆಗೆ ಮುಂದಾಗಿಲ್ಲ. ಇನ್ನಷ್ಟು ದಿನ ಬಿಟ್ಟರೆ ರೋಗಕ್ಕೆ ಜನಕ್ಕೆ ತುತ್ತಾಗಬಹುದಾಗಿದೆ. ಸಂಬಂಧಪಟ್ಟವರು ಕೂಡಲೇ ಸ್ವಚ್ಛತೆಗೆ ಮುಂದಾಗಬೇಕು.
ಸಚಿನ್ ಕುಂಬಾರ ಇಂಗಳಗಿ ಗ್ರಾಮಸ್ಥ.
ಬಸ್ ನಿಲ್ದಾಣದಲ್ಲಿನ ಶೌಚಾಲಯದ ಹತ್ತಿರ ಶೌಚ ನೀರು ನಿಲ್ಲುತ್ತಿರುವುದು ಗಮನಕ್ಕಿಲ್ಲ. ಶೌಚಾಲಯದ ಸಿಬ್ಬಂದಿಗೆ ಹೇಳಿ ನಾಳೆಯೇ ಸ್ವಛ್ಛತೆ ಮಾಡಿಸಲಾಗುವುದು.
ರಾಹುಲ್ ಹೊನ್ನಸೋರೆ ಘಟಕ ವ್ಯವಸ್ಥಾಪಕ ಇಂಡಿ.