ಇಂಡಿ

ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ

ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ

ಇಂಡಿ 27: ಕೆಂಪೇಗೌಡರು ಪ್ರಜಾವತ್ಸಲ, ಉದಾರಿ ಮತ್ತು ಪರೋಪಕಾರಿಯಾಗಿ ಸಾಮಾಜಿಕ ಸುಧಾರಣೆಗೈದವರು. ಸುಂದರ, ಸುಸಜ್ಜಿತ ಬೆಂಗಳೂರು ನಗರ ನಿರ್ಮಾಣ ಮಾಡಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ ಅವರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಆರ್‌. ನಡಗಡ್ಡಿ ಹೇಳಿದರು. 

ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ನಲಿಕಲಿ ಶಿಕ್ಷಕರ ಪುನಶ್ಚೇತನ ತರಬೇತಿಯಲ್ಲಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆಗೆ ಚಾಲನೆ ನೀಡಿ  ಅವರು ಮಾತನಾಡಿದರು. 

ಬಿ.ಆರ್‌.ಪಿ. ಅಧಿಕಾರಿ ಆಯ್‌.ಜಿ. ಆಳೂರ ಮಾತನಾಡಿ, ಬೆಂಗಳೂರಿನಲ್ಲಿ ದೇವಾಲಯಗಳು ಮತ್ತು ನೀರಿನ ಜಲಾಶಯಗಳನ್ನು ನಿರ್ಮಿಸಲು ಕೊಡುಗೆ ನೀಡಿದ್ದಾರೆ. ಬಾಲ್ಯದಲ್ಲಿಯೇ ನಾಯಕತ್ವದ ಕೌಶಲ್ಯ ತೋರಿದ ಕೀರ್ತಿ ಕೆಂಪೇಗೌಡರದು ಎಂದು ಹೇಳಿದರು. 

ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟ ಅವರ ಸರ್ವಧರ್ಮ ಸಹಿಷ್ಣುತೆಯು ಪ್ರಜೆಗಳ ಮನಗೆದ್ದಿತ್ತು. ಒಬ್ಬ ಜನಪರ ಆಡಳಿತಗಾರನಿಗೆ ಇರಬೇಕಾಗಿದ್ದ ದೂರದರ್ಶಿತ್ವವನ್ನು ಹೊಂದಿದ್ದ ಕೆಂಪೇಗೌಡರು ಸದಾ ಮುಂಚೂಣಿ ನಾಯಕರಾಗಿದ್ದರು ಎಂದು ಹೇಳಿದರು. 

ಹಿರೇರೂಗಿ ಕನ್ನಡ ಸಿಆರ್‌ಪಿ ಸಂತೋಷ ಚವ್ಹಾಣ, ಅಥರ್ಗ ಸಿಆರ್‌ಪಿ ಸಂತೋಷ ನೆರಕಿ, ತೆನ್ನಿಹಳ್ಳಿ ಸಿಆರ್‌ಪಿ ಎಸ್‌.ಎಸ್‌. ಕ್ಯಾತಾ, ತಾಂಬಾ ಸಿಆರ್‌ಪಿ ಮಲ್ಲಿಕಾರ್ಜುನ ಸೋನಂದ, ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಕೆಜಿಎಸ್ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ, ಯುಬಿಎಸ್ ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ ಸೇರಿದಂತೆ ನಾಲ್ಕು ಕ್ಲಸ್ಟರ್ ನ ಶಿಕ್ಷಕರು ಉಪಸ್ಥಿತರಿದ್ದರು. 

ಸುದ್ದಿ ಓದಿ