ರೈತರ ಹಿತ ಮತ್ತು ಸುರಕ್ಷತೆಗಾಗಿ ವಿದ್ಯುತ್ ಪೂರೈಕೆ ಸಮಯ ಬದಲಾಯಿಸಲು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಆಗ್ರಹ
ಬೀದರ್ 27: ದಕ್ಷಿಣ ವಿಧಾನಸಭಾ ಕ್ಷೇತ್ರದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಅವರ ಜೀವದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರೈತರ ಜಮೀನುಗಳಿಗೆ ಪೂರೈಸಲಾಗುತ್ತಿರುವ ವಿದ್ಯುತ್ ಸಮಯವನ್ನು ಬದಲಾಯಿಸಬೇಕು ಎಂದು ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಪ್ರಸ್ತುತ ರೈತರ ಜಮೀನುಗಳಿಗೆ ನಸುಕಿನ ಜಾವ 3 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಈ ವೇಳಾಪಟ್ಟಿಯನ್ನು ಬದಲಾಯಿಸಿ, ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಿರಂತರವಾಗಿ ಏಳು ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂಬುದು ಶಾಸಕರ ಬೇಡಿಕೆಯಾಗಿದೆ.ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಲು ನಸುಕಿನ ಜಾವದಲ್ಲೇ ಮನೆಯಿಂದ ಹೊರಡಬೇಕಾಗುತ್ತದೆ. ಕತ್ತಲಿನಲ್ಲಿ ಜಮೀನುಗಳಿಗೆ ತೆರಳುವಾಗ ಹಾವು, ಚೇಳು ಸೇರಿದಂತೆ ವಿಷಕಾರಿ ಜೀವಿಗಳು ಹಾಗೂ ಇತರ ಕಾಡುಪ್ರಾಣಿಗಳಿಂದ ಅಪಾಯ ಎದುರಾಗುವ ಭೀತಿ ಇರುತ್ತದೆ.
ಅಲ್ಲದೆ, ಕತ್ತಲಿನಲ್ಲಿ ಕೃಷಿ ಕೆಲಸಗಳನ್ನು ನಿರ್ವಹಿಸುವುದು ರೈತರಿಗೆ ಸುರಕ್ಷತೆಯ ದೃಷ್ಟಿಯಿಂದಲೂ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಜೀವದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ.ರೈತರು ಬೆಳಗಿನ ಬೆಳಕಿನಲ್ಲಿ ಜಮೀನುಗಳಿಗೆ ತೆರಳಿ ನೀರಾವರಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಸಮಯವನ್ನು ಬದಲಾಯಿಸಬೇಕು.