ಹಾಲು,ಬಸ್ ಪ್ರಯಾಣ ದರ ಇಳಿಕೆಗೆ ಸಿಪಿಐ ಒತ್ತಾಯ
ಲೋಕದರ್ಶನ ವರದಿ
ಹೂವಿನಹಡಗಲಿ 12: ’ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಸರ್ಕಾರ ಮತ್ತೊಂದೆಡೆ ಬಸ್ ದರ ಏರಿಕೆ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಿಪಿಐ ಮುಖಂಡ ಎಚ್.ಎಂ. ಸಂತೋಷಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಬುಧವಾರ ಭಾರತ ಕಮ್ಯುನಿಸ್ಟ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ದೀಪಾವಳಿ ಸಂದರ್ಭದಲ್ಲಿ ಹಾಲಿನ ಬೆಲೆ, ಬಸ್ ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸುವ ಮೂಲಕ ಸರ್ಕಾರ ಬಡವರು, ಜನಸಾಮಾನ್ಯರ ಬದುಕನ್ನು ಕತ್ತಲೆಯಾಗಿಸಿದೆ. ಗ್ಯಾರಂಟಿಗಳಿಗೆ ಬೇಕಾಗುವ ಹಣವನ್ನು ಬಡವರ ಜೇಬಿನಿಂದಲೇ ಕಿತ್ತು ಬಡವರಿಗೆ ಹಂಚುವುದಾದರೆ ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದರು.’ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ, ಬಡವರ ಹೊಟ್ಟೆ ಮೇಲೆ ಹೊಡೆಯುವುದನ್ನು ನಿಲ್ಲಿಸಬೇಕು.
ಹಾಲು ಮತ್ತು ಬಸ್ ಟಿಕೆಟ್ ದರಗಳನ್ನು ಇಳಿಸಬೇಕು’ ಎಂದು ಒತ್ತಾಯಿಸಿದರು.ಸಿಪಿಐ ಮುಖಂಡರಾದ ಗುಡಿಹಳ್ಳಿ ಹಾಲೇಶ, ಸುರೇಶ ಹಲಗಿ ಮಾತನಾಡಿದರು. ಬಾವಾಜಿ ಜಂಗ್ಲಿ ಸಾಬ್, ಬಳಿಗಾರ ಪಕೃದ್ದೀನ್ ಇತರರು ಇದ್ದರು. ದ್ವಾರಕೀಶ ಕ್ರಾಂತೀಗೀತೆ ಹಾಡಿದರು.ಪಂಜಿನ ಮೆರವಣಿಗೆ ತಡೆದ ಪೊಲೀಸರು: ದರ ಏರಿಕೆ ಖಂಡಿಸಿ ಸಿಪಿಐ ಮುಖಂಡರು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದರು.
ಪಂಜುಗಳಿಗೆ ತಂದಿದ್ದ ಕಟ್ಟಿಗೆಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಪೊಲೀಸರು, ಪ್ರತಿಭಟನಾಕಾರರ ನಡುವೆ ಲಘು ಮಾತಿನ ಚಕಮಕಿ ನಡೆಯಿತು. ವ್ಯವಸ್ಥೆ ವಿರುದ್ಧ ಪ್ರತಿಭಟಿಸುವ ಸಂವಿಧಾನಿಕ ಹಕ್ಕು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಖಂಡಿಸಿದರು. ಮೇಣದ ಬತ್ತಿ ಹಿಡಿದು ಪ್ರತಿಭಟನೆ ಮುಗಿಸಿದರು..