ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ: ರಾಠೋಡ
ಇಂಡಿ: ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಅದನ್ನು ಮನುಷ್ಯರಿಂದಲೇ ಪಡೆಯಬೇಕು. ಅದಕ್ಕೆ ಜನರು ಹೆಚ್ಚು-ಹೆಚ್ಚು ರಕ್ತದಾನ ಮಾಡಲು ಮುಂದೆ ಬರುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪುರಸಭೆ ಸದಸ್ಯ ಪಿಂಟು ರಾಠೋಡ ಹೇಳಿದರು.
ರವಿವಾರ ಪಟ್ಟಣದ ಕೆಇಬಿ ಎಲ್.ಟಿ.ಯಲ್ಲಿ ದುರ್ಗಾದೇವಿ, ಸಂತ ಸೇವಾಲಾಲ್ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನದಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಬದಲಾಗಿ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ರಕ್ತದ ಕೊರತೆ ಹೋಗಲಾಡಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಈಗಾಗಲೇ ಹಲವು ಸಮುದಾಯದ ಮುಖಂಡರು ರಕ್ತದಾನ ಶಿಬಿರ ನಡೆಸಲು ಸಮ್ಮತಿಸಿದ್ದಾರೆ. ಆಯಾ ಸಮುದಾಯಗಳು ರಕ್ತದಾನ ಮಾಡಲು ಯುವಕರನ್ನು ಪ್ರೇರೇಪಿಸುವುದರಿಂದ ರಕ್ತದ ಕೊರತೆ ನಿವಾರಿಸಬಹುದು ಎಂದರು.
ಬಿ.ಎಚ್.ಇ.ಒ. ವೈ.ಎಂ. ಪೂಜಾರಿ ಮಾತನಾಡಿ, ರಕ್ತವೆಂಬ ವಸ್ತುವೇ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ, ಆರೋಗ್ಯವಂತ ಯುವಕರ ರಕ್ತವು ಬಹಳಷ್ಟು ಜನರಿಗೆ ಉಪಕಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ದುಶ್ಚಟಗಳ ದಾಸರಾಗುತ್ತಿರುವ ಯುವಕರು ವಿವಿಧ ರೋಗಗಳನ್ನು ಅಚಿಟಿಸಿಕೊಂಡು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಬೇಕಾಗಿದ್ದ ರಕ್ತವು ವ್ಯರ್ಥವಾಗುತ್ತದೆ ಎಂದರು.
ಬೆಳಗ್ಗೆ 11 ಘಂಟೆಗೆ ಆರಂಭವಾದ ಶಿಬಿರವು ಸಾಯಂಕಾಲದವರೆಗೂ ನಡೆಯಿತು. ಶಿಬಿರದಲ್ಲಿ ಸುಮಾರು 55 ಜನ ಸ್ವಯಂ ಪ್ರೇರಿತವಾಗಿ ರಕ್ತದಾನವನ್ನು ಮಾಡಿದರು.
ರಕ್ತದಾನ ಶಿಬಿರದಲ್ಲಿ ಡಾ. ಪ್ರಶಾಂತ ದೂಮಗೊಂಡ, ಡಾ. ಮಮದಾಪುರ, ಎಸ್.ಎಚ್.ಆಯ್.ಒ. ಗೀತಾ ಎಸ್. ಪತ್ತಾರ, ಬಸವರಾಜ ಪಾಟೀಲ, ಅಶೋಕ ಬಿರಾದಾರ ಸೇರಿದಂತೆ ಅನೇಕ ಆಶಾಕಾರ್ಯಕರ್ತೆಯರು ಇದ್ದರು.