ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ರೈತಪರ ಕಾಳಜಿಗೆ ಹಿಡಿದ ಕೈಗನ್ನಡಿ: ಪಾಟೀಲ
ಇಂಡಿ26: ಇಂಡಿ ತಾಲೂಕಿಗೆ ಅಂಟಿರುವ ಬರಪೀಡಿತ ಪ್ರದೇಶ, ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಳಚುವ ನಿಟ್ಟಿನಲ್ಲಿ ಬಿಜೆಪಿ ಸರಕಾರ ದಿಟ್ಟ ಹೆಜ್ಜೆಯನ್ನಿರಿಸಿದ್ದು, ಈ ಭಾಗದ ಮಹಾತ್ವಾಕಾಂಕ್ಷಿ ಹೋರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವಿದು ರೈತಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಬಣ್ಣಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀರಾವರಿಂದ ವಂಚಿತಗೊಂಡಿರುವ ಇಂಡಿ, ಬಬಲೇಶ್ವರ, ಚಡಚಣ, ಹಾಗೂ ವಿಜಯಪುರ ತಾಲೂಕಿನ ಸುಮಾರು 56 ಹಳ್ಳಿಗಳು ಈ ಯೋಜನೆಯಿಂದ ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ. ಇದರಿಂದ ಈ ಭಾಗದ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಾರರಿಗೆ ಸಾಕ್ಷಷ್ಟು ಸಹಾಯವಾಗಲಿದೆ. ಲಿಂಬೆ, ದಾಳಿಂಬೆ, ದ್ರಾಕ್ಷಿ ಮುಂತಾದ ತೋಟಗಾರಿಕೆ ಬೆಳೆಯಿಂದ ಈ ಭಾಗ ಸಮೃದ್ಧಿಗೊಳ್ಳಲಿದೆ. ಹೀಗಾಗಿ ಇಂಥ ಯೋಜನೆ ಸಾಕಾರಗೊಳಿಸಿದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಇಂಡಿ ತಾಲೂಕಿನ ಇಂಚಗೇರಿ ಹಾಗೂ ಇತರೆ 41 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಇಂಡಿ ಭೀಮಾನದಿ ಭಾಗದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಅಲ್ಲದೇ ಈ ಬಾರಿ ಮಳೆಗಾಲದಲ್ಲೂ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ಸೌಲಭ್ಯ ಕಲ್ಪಿಸಬೇಕಾಯಿತು. ಆದರೆ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಸಂಪೂರ್ಣ ನೀಗಲಿದೆ. ಅಲ್ಲದೇ, ಈಗಾಗಲೇ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಪ್ರಗತಿಯಲ್ಲಿದ್ದು ಈ ಎಲ್ಲ ಯೋಜನೆಗಳಿಂದ ಇಂಡಿ ಭಾಗ ಜಲದ ನಾಡಾಗಲಿದೆ.
ಅದರಲ್ಲೂ ನಮ್ಮ ಜಿಲ್ಲೆಯವರೇ ಆದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಎಷ್ಟು ಕೃತಜ್ಞತೆ ತಿಳಿಸಿದರೂ ಸಾಲದು. ಕಳೆದ 40 ವರ್ಷಗಳಿಂದ ಈ ಭಾಗದ ರೈತರು ಹೋರಾಟ ಮಾಟಿಕೊಂಡು ಬಂದಿದ್ದರೂ ಯೋಜನೆ ಸಾಕಾರಗೊಂಡಿರಲಿಲ್ಲ. ಹೀಗಾಗಿ ನಾಲ್ಕು ತಾಲೂಕುಗಳ ಸುಮಾರು 1,22885 ಎಕರೆ ಪ್ರದೇಶ ನೀರಾವರಿಯಿಂದ ವಂಚಿತಗೊಂಡಿತ್ತು. ಈ ಹಿಂದಿನ ಸರಕಾರಗಳು ಕೇವಲ ಆಶ್ವಾಸನೆ, ಭರವಸೆ, ಚರ್ಚೆಯಲ್ಲಿಯೇ ಕಾಲಹರಣ ಮಾಟಿದ್ದವು. ಇದೀಗ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಇವರ ಇಚ್ಛಾಶಕ್ತಿಯ ಫಲವಾಗಿ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.