ಇಂಡಿ

ದುಡಿಯುವ ಕೆಲಸದ ಜೊತೆಗೆ ಕೂಲಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ

ದುಡಿಯುವ ಕೆಲಸದ  ಜೊತೆಗೆ ಕೂಲಿ ಕಾರ್ಮಿಕರಿಗೆ ಆರೋಗ್ಯ ಭಾಗ್ಯ

ಇಂಡಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ  ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ. ಅಲ್ಲದೇ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಅವರಿಗೆ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ತಾಪಂ ಐಇಸಿ ಸಂಯೋಜಕಿ ಡಾ. ಜ್ಞಾನಜ್ಯೋತಿ ಚಾಂದಕವಠೆ ಹೇಳಿದರು.

ಶುಕ್ರವಾರ ತಾಲೂಕಿನ ಬಸನಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಕ್ಯಾತನಕೆರಿ ಗ್ರಾಮದಲ್ಲಿ ಅಮೃತ ಸರೋವರ ಕಾಮಗಾರಿಯ ಸ್ಥಳದಲ್ಲಿ  ಆರೋಗ್ಯ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿನ ಇನ್ನೂಳಿದ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕೆಂದರು. ಇಂತಹ ಉತ್ತಮವಾದ ಸೌಲಭ್ಯವನ್ನು ಎಲ್ಲಾ ಕೂಲಿಕಾರರು ತಪ್ಪದೇ ಪಡೆದುಕೊಳ್ಳಬೇಕು. ಏಪ್ರಿಲ್ 2023ರಿಂದ ದುಡಿಯುವ ಕಾರ್ಮಿಕರಿಗೆ ದಿನಗೂಲಿ 309 ರಿಂದ 316/- ಹೆಚ್ಚಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಹಣವನ್ನು ನೀಡಲಾಗುವುದರ ಜೊತೆಗೆ,  ಕಲ್ಬುರ್ಗಾ  ಮತ್ತ ಬೆಳಗಾವಿ ವಿಭಾಗದ ಜಿಲ್ಲೆಗಳಿಗೆ ಅನ್ವಯಿಸುವಂತೆ ಬೇಸಿಗೆ ತಾಪಮಾನದ ಪರಿಣಾಮವಾಗಿ ಕೂಲಿಕಾರರ ಹಿತದೃಷ್ಟಯಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ  ಕೆಲಸ ಪರಿಮಾಣದಲ್ಲಿ ಶೇ.30ರಷ್ಟು ರಿಯಾಯ್ತಿ ನೀಡಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಮನವಿ ಮಾಡಿಕೊಂಡರು.

ಕೆಎಚ್ಪಿಟಿ ಸಿಬ್ಬಂದಿ ಲೋಹಿತ ಕುಮಾರ ರೂಗಿ ಮಾತನಾಡಿ, ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿಯನ್ನು ನೀಡಿ, 106 ಜನರಿಗೆ ರಕ್ತದ ಒತ್ತಡ, ಶುಗರ್ ಪರೀಕ್ಷೆಯನ್ನು ಮಾಡಿದರು. 

ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಂತ್ರಿಕ ಸಹಾಯಕ ಬಾಬು ನಾಯಕ, ಬಿಎಫ್ಟಿ ವಿನಾಯಕ ವಾಲಿಕಾರ, ಗ್ರಾಮ ಕಾಯಕ ಮಿತ್ರ ಶ್ವೇತ ರಜಪೂತ, ಸಂತೋಷ, ವಿರೇಶ ಬಡಿಗೇರ, ಆರೋಗ್ಯ ಇಲಾಖೆಯ ಡಿ.ಜಿ. ಉಮದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ನರೇಗಾ ಕಾರ್ಮಿಕರೇ ಭಕ್ತಿಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಸುದ್ದಿ ಓದಿ