ಸಾವಿರಾರು ಭಕ್ತರ ಮಧ್ಯೆ ನಡೆದ ಮದುವೆ ಇದು ಭಾಗ್ಯವಂತರ ಮದುವೆ: ಮಲ್ಲಿಕಾರ್ಜುನ ಶ್ರೀ
ಇಂಡಿ: ವಿವಾಹಗಳು ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಸರಳ ಸಾಮೂಹಿಕ ವಿವಾಹಗಳ ಅಗತ್ಯತೆ ಹೆಚ್ಚಿದೆ. ನೂರಾರು ಪೂಜ್ಯರು, ಸಂಸದರ, ಶಾಸಕರ ಸಾವಿರಾರು ಭಕ್ತರ ಮಧ್ಯೆ ನಡೆದ ಮದುವೆ ಇದು ಭಾಗ್ಯವಂತರ ಮದುವೆ ಎಂದು ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಅವರು ಸೋಮವಾರ ಪಟ್ಟಣದ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶಾಂತೇಶ್ವರ ಟ್ರಸ್ಟ ಸಮಿತಿ ಇಂಡಿ ಮತ್ತು ಶ್ರೀ ಶಾಂತೇಶ್ವರ ಸೌಹಾರ್ಧ ಪತ್ತಿನ ಸಹಕಾರಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾಶಿ ನೂತನ ಪೀಠಾಧಿಪತಿಗಳಾದ ಅನಂತ ಶ್ರೀ ವಿಭೂಷಿತ ಡಾ. ಮಲ್ಲಿಕಾರ್ಜುನ ಶಿವಾಚಾರ್ಯರರ ಅಡ್ಡ ಪಲ್ಲಕ್ಕಿ ಉತ್ಸವ ಮತ್ತು ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇಂಡಿಯ ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿಯವರು ಕಳೆದ ಹತ್ತು ವರ್ಷಗಳಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮದುವೆ ಮಾಡಿದ್ದು ಸ್ವಾಗತಾರ್ಹ, ಕಾಸುಗೌಡರ ನೇತೃತ್ವದಲ್ಲಿ ಇನ್ನಷ್ಟು ಹೆಚ್ಚು ಮದುವೆಗಳಾಗಿ ಸಮಾಜಕ್ಕೆ ಪೂರಕ ಕೆಲಸವಾಗಲಿ ಎಂದರು.
ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಮುಸ್ಲಿಂ ಬಾಂಧವರು ಅಡ್ಡಪಲ್ಲಕ್ಕಿ ಹೊತ್ತು ಹೂವಿನ ಮಳೆ ಸುರಿದು ಪಾಲ್ಗೊಂಡಿದ್ದು ಇಂಡಿಯ ಸಂಸ್ಕಾರವಂತರ ನಾಡು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ ಇದು ಬಡವರ ಮದುವೆ ಅಲ್ಲ, ವೈಭವದ ಮತ್ತು ಪುಣ್ಯವಂತರ ಮದುವೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಮೂಲಕ ಕುಟುಂಬದ, ಸಮಾಜದ, ದೇಶದ ಪ್ರಗತಿಗೆ ಪೂರಕವಾಗಬೇಕೆಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಶಾಂತೇಶ್ವರ ದೇವಸ್ಥಾನ ಪಟ್ಟಣದ ಮಧ್ಯ ಭಾಗದಲ್ಲಿದ್ದು ಉತ್ತಮ ರಸ್ತೆ ನಿರ್ಮಾಣ ಬರುವ ವರ್ಷದ ಒಳಗಾಗಿ ಮಾಡುವದಾಗಿ ತಿಳಿಸಿ ಶಾಂತೇಶ್ವರರ ಆಶೀರ್ವಾದದಿಂದ ಇಂದು ನವ ಜೋಡಿಯಾಗುತ್ತಿರುವ ದಂಪತಿಗಳ ಬಾಳು ಬೆಳಗಲಿ ಎಂದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಸುಗೌಡ ಬಿರಾದಾರ, ರಾಘವೇಂದ್ರ ಕುಲಕರ್ಣಿ, ವೈ.ಜಿ.ಬಿರಾದಾರ, ವಿರುಪಾಕ್ಷಿ ಶ್ರೀಗಳು ಮಾತನಾಡಿದರು.
ವೇದಿಕೆಯಲ್ಲಿ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಮನಗೂಳಿಯ ಸಂಗನಬಸವ ಮಹಾಸ್ವಾಮೀಜಿ, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ರೋಡಗಿಯ ಶಿವಲಿಂಗೇಶ್ವರ ಶಿವಾಚಾರ್ಯರು, ಇಂಡಿಯ ಶಾಂತಯ್ಯ ಹಿರೇಮಠ, ನಾದದ ಶಿವಾನಂದ ಶಿವಾಚಾರ್ಯರು, ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಪ್ರಭಾಕರ ಬಗಲಿ, ಅನೀಲಗೌಡ ಬಿರಾದಾರ, ಶ್ರೀಮಂತ ಇಂಡಿ, ಶಂಕರಗೌಡ ಪಾಟೀಲ ಡೊಮನಾಳ, ವಿರಾಜ ಪಾಟೀಲ, ಭೀಮು ರಾಠೋಡ ಮತ್ತಿತರಿದ್ದರು.
ಸಾಧಕರಾದ ಬಸವರಾಜ ಸಾಹುಕಾರ ಕುಮಸಗಿ, ಡಾಽಽ ಆದರ್ಶ ಬಗಲಿ, ಶ್ರೀಮಂತ ಇಂಡಿ, ಅಶೋಕ ಹದಗಲ್ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಗೌರಿ ನೃತ್ಯ ಮಾಡಿ ಸಾರ್ವಜನಿಕರನ್ನು ರಂಜಿಸಿದಳು.
ಹತ್ತು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದವು.
ಇದಕ್ಕೂ ಮುಂಚೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಕುಂಭ ಹೊತ್ತ ಮೆರವಣೆಗೆ ಮತ್ತು ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಕಾಶೀ ಜಗದ್ಗುರು ಅನಂತ ಶ್ರೀ ವಿಭೂಷಿತ ಡಾ. ಮಲ್ಲಿಕಾರ್ಜುನ ಶಿವಾಚಾರ್ಯರರ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಮಹಿಳೆಯರು ಕುಂಭಹೊತ್ತು ಸಾಗಿದರು.
ಪಟ್ಟಣದ ಶಾಂತೇಶ್ವರ ದೇವಸ್ಥಾನದ ಹತ್ತಿರ ನಡೆದ ಸಾಮೂಹಿಕ ವಿವಾಹವನ್ನು ಕಾಶಿ ಶ್ರೀಗಳು ಉದ್ಘಾಟಿಸಿದರು.