ತ್ರಿವರ್ಣ ಧ್ವಜದ ಬೃಹತ್ ತಿರಂಗ ಯಾತ್ರೆ
ಇಂಡಿ 12: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೆ ಬಲಿದಾನಗೈದ ವೀರರ ಸ್ಮರಣೆಗಾಗಿ ಪಟ್ಟಣದ ಗುರು ಬಸವ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ತ್ರಿವರ್ಣ ಧ್ವಜದ ಬೃಹತ್ ತಿರಂಗ ಯಾತ್ರೆ ನಡೆಯಿತು.
ಶಾಸಕ ಯಶವಂತರಾಯಗೌಡ ಪಾಟೀಲರು ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ಶಕ್ತಿ ದೇಶ ಶಕ್ತಿಯಾಗಿರುವದರಿಂದ ಇಂದಿನ ಯುವ ಪೀಳಿಗೆ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಹಾಗೂ ರಾಷ್ಟ್ರ ಲಾಂಚನವನ್ನು ಗೌರವಿಸುತ್ತಾ ಸಂವಿಧಾನದ ಗೌರವವನ್ನು ಎತ್ತಿ ಹಿಡಿಯಬೇಕು ಎಂದರು.
ತಿರಂಗ ಯಾತ್ರೆ ತಾಲೂಕಾ ಆಡಳಿತ ಸೌಧ ತಲುಪಿದಾಗ ಅಲ್ಲಿ ತಹಶೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿ, ಭಾರತದ ಸ್ವಾತಂತ್ರ್ಯ ಇತಿಹಾಸದ ವಿವಿಧ ಮಜಲುಗಳನ್ನು ತಿಳಿಸುತ್ತ ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕೆಂದರು.
1000 ಅಡಿ ಉದ್ದ 9 ಅಡಿ ಅಗಲವಿರುವ ತ್ರಿವರ್ಣ ಧ್ವಜ ವಿದ್ಯಾರ್ಥಿಗಳು ಭಾರತ ಮಾತಾ ಕಿ ಜೈ ಹಾಗೂ ಒಂದೇ ಮಾತರಂ ಘೋಷಣೆ ಕೂಗಿದರು.
ತಿರಂಗ ಯಾತ್ರೆ ಪಟ್ಟಣದ ಶಿವಾಜಿ ವೃತ್ತ, ಅಂಬೇಡಕರ ವೃತ್ತ, ಕೆಈಬಿ, ಸೇವಾಲಾಲ ವೃತ್ತ, ಬಸವೇಶ್ವರ ವೃತ್ತ ಮೂಲಕ ತಹಸೀಲ್ದಾರ ಕಚೇರಿಗೆ ಬಂದು ತಲುಪಿತು.
ಗುರುಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಬಿರಾದಾರ, ಅಭಿಮನ್ಯು ಬಿರಾದಾರ, ಆಡಳಿತಾಧಿಕಾರಿ ಎ.ಎಸ್. ಪಾಟೀಲ, ಪ್ರಾಚಾರ್ಯ ಬಿ.ಜಿ. ಕವಟಗಿ, ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಶಿಕ್ಷಕ ಮತ್ತು ಶಿಕ್ಷಕಿಯರು, ದೈಹಿಕ ಶಿಕ್ಷಣಾಧಿಕಾರಿ ಎ.ಎಸ್. ಲಾಳಸೇರಿ, ಹಾಗೂ ತಾಲೂಕಿನ ಎಲ್ಲ ದೈಹಿಕ ಶಿಕ್ಷಕರು, ಪಟ್ಟಣದ ಗಣ್ಯ ವರ್ತಕರು, ನಾಗರಿಕರು, ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.