ಫೆ 13ರ ಒಳಗೆ ರೇಲ್ವೆ ಮೇಲ್ಸುತುವೆ ಕಾಮಗಾರಿ ಪ್ರಾರಂಭಿಸದಿದ್ದರೆ ಮಾಡು ಇಲ್ಲವೆ ಮಡಿ ಪಾಟೀಲ ಎಚ್ಚರಿಕೆ
ರಾಣೇಬೆನ್ನೂರು: ಜ 30 ರಾಣೇಬೆನ್ನೂರು-ದೇವರಗುಡ್ಡ ರಸ್ತೆಯ ಗೇಟ್ ನಂ.219 ಕ್ಕೆ ಈಗಾಗಲೆ ಮಂಜೂರಾಗಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಫೆ. 13 ರ ಒಳಗೆ ಪ್ರಾರಂಭಿಸದಿದ್ದರೆ 13 ನೇ ತಾರೀಖು ಸೋಮವಾರ ದಿವಸ ಎಲ್ಲಾ ಸಂಘಟನೆಗಳು, ನಾಗರಿಕರ ವಿಶ್ವಾಸ ಪಡೆದು ವಾಣಿಜ್ಯ ನಗರಿ ರಾಣೇಬೆನ್ನೂರುನ್ನು ಸಂಪೂರ್ಣವಾಗಿ ಬಂದ್ ಮಾಡಿ ರೇಲು ರೋಖೋ, ಹೆದ್ದಾರಿ ತಡೆ ಚಳುವಳಿಯನ್ನು ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭಿಸಲಾಗುವುದೆಂದು ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಎಚ್ಚರಿಸಿದರು.
ಅವರು ಇಂದು ತಹಶೀಲ್ದಾರ್ ಶಂಕರ್ ಜಿ.ಎಸ್. ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ರಘನಂದನಮೂರ್ತಿ ಯವರ ಆದೇಶದ ಮೇರೆಗೆ ರೇಲ್ವೆ ಮೇಲ್ಸೇತುವೆ ಅವರ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳ ಮುಖಂಡರುಗಳನ್ನೊಳಗೊಂಡ ವಿಶೇಷ ಸಭೆಯಲ್ಲಿ ಮಾತನಾಡಿದ ಪಾಟೀಲರು ರೇಲ್ವೆ ಮೇಲ್ಸೇತುವೆ ನಿರ್ಮಾಣದ ಹೋರಾಟ ಸ್ವಾಭಿಮಾನದ ಹೋರಾಟವಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತ 10 ನೇ ತಾರೀಖಿನೊಳಗೆ ಕಾಮಗಾರಿ ಪ್ರಾರಂಭಿಸುತ್ತೇವೆಂದು ಹೇಳಿರುವ ಹಿನ್ನೆಲೆಯಲ್ಲಿ ಭರವಸೆಯನ್ನು 30 ನೇ ತಾರೀಖಿನಂದು ನಡೆಯಬೇಕಿದ್ದ ಚಳುವಳಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದೇವೆ. ಅಧಿಕಾರಿಗಳ ಭರವಸೆ ಹುಸಿಯಾದರೆ 13 ನೇ ತಾರೀಖು ಉಗ್ರವಾದ ಹೋರಾಟವನ್ನು ಮಾಡುತ್ತೇವೆಂದರು.
ತಹಶೀಲ್ದಾರ್ ಶಂಕರ್ ಜಿ.ಎಸ್. ರವರು ಜಿಲ್ಲಾಧಿಕಾರಿಗಳು ಈಗಾಗಲೆ ಬೆಂಗಳೂರಿನಲ್ಲಿ ಈ ಕಾರ್ಯದ ಬಗ್ಗೆ ಕಾರ್ಯೋನ್ಮುಖರಾಗಿದ್ದಾರೆ, ಯಾವುದೇ ಪರಿಸ್ಥಿತಿಯಲ್ಲಿ ವಿಳಂಭ ಮಾಡುವುದಿಲ್ಲ, ಜಿಲ್ಲಾಧಿಕಾರಿಗಳು ಈ ಬಗ್ಗೆ ಭರವಸೆ ನೀಡಿ ಸಭೆ ಕರೆಯಲು ಆದೇಶ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಸಭೆ ಕರೆದಿದ್ದೇನೆ ವಿಶ್ವಾಸ ಇಡಬೇಕೆಂದು ಹೋರಾಟಗಾರರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಮುಖಂಡರಾದ ಯು.ಆರ್. ಗುರುಲಿಂಗಪ್ಪಗೌಡ್ರ, ಪ್ರಭುಸ್ವಾಮಿ ಕರಜಿಗಿಮಠ, ಇಸ್ಮಾಯಿಲ್ ಸಾಬ್ ರಾಣೇಬೆನ್ನೂರು, ತುಕ್ಕಪ್ಪ ಲಮಾಣಿ, ಜಗದೀಶ ಕೆರೂಡಿ, ನಿತ್ಯಾನಂದ ಕುಂದಾಪುರ, ಬಸವರಾಜ ಕೊಂಗಿಯವರ, ಸಿ.ಟಿ. ಪಾಟೀಲ, ಉಮೇಶಣ್ಣ ಹೊನ್ನಾಳಿ ಆಕ್ರೋಶ ಭರಿತವಾಗಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಹಣ ಅಧಿಕಾರಿ ರಮೇಶ ಕೆ. ಸಹಾಯಕ ಇಂಜಿನೀರ್ ಬಿ.ಎಲ್. ಹೊನ್ನಪ್ಪ ಸದಾನಂದ, ರೇಲ್ವೆ ಇಲಾಖೆಯ ಮತ್ತು ನಗರಸಭೆಯ ಪೊಲೀಸ್ ಇಲಾಖೆಯವರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕೊಟ್ರೇಶಪ್ಪ ಎಮ್ಮಿ, ಶಂಭು ನರಸಗೊಂಡರ, ಬಸಣ್ಣ ನೆಲಗಲ್ಲ, ರಾಜು ಓಲೇಕಾರ, ನಿಂಗಣ್ಣ ಹೊನ್ನಳ್ಳಿ, ಕೇಶಪ್ಪ ಹಡದಿ ಸೇರಿದಂತೆ ನೂರಾರು ಹೋರಾಟಗಾರರು ಭಾಗವಹಿಸಿದ್ದರು