ವಿಶೇಷ ಸಭೆಯಲ್ಲಿ ಗದ್ದಲ ಗಲಾಟೆ 35.55 ಲಕ್ಷ ರೂಗೆ ಸಂತೆ ಶುಲ್ಕ ಹರಾಜಿಗೆ ಅನುಮೋದನೆ, ಉಪಾಧ್ಯಕ್ಷ ಸಭಾತ್ಯಾಗ
ರಾಣೇಬೆನ್ನೂರ: 2023 - 24ನೇ ಸಾಲಿಗಾಗಿ ಸಂತೆ ಶುಲ್ಕ ವಸೂಲಾತಿಯ ಬಹಿರಂಗ ಹರಾಜಿಗೆ ನಗರಸಭೆ ಅನುಮೋದನೆ ನೀಡಿದ ಮಧ್ಯೆಯೇ ನಗರಸಭೆಯಲ್ಲಿ ಸದಸ್ಯರ ಗದ್ದಲದ ನಡುವೆ ಉಪಾಧ್ಯಕ್ಷೆ ಸಭಾ ತ್ಯಾಗ ಮಾಡಿದ ಘಟನೆ ಸೋಮವಾರದಂದು ನಡೆದಿದೆ. ಇಲ್ಲಿನ ನಗರಸಭೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಜರುಗಿದ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯಲ್ಲಿ ಸಂತೆ ಶುಲ್ಕ ವಸೂಲಾತಿ ಬಹಿರಂಗ ಹರಾಜು ಸಂಬಂಧ ಸದಸ್ಯರ ಮಧ್ಯೆ ಮಾತಿನ ಚಕಮಕಿ, ವಾಗ್ವಾದ, ಉಂಟಾಗಿ ಗದ್ದಲ- ಗೊಂದಲಮಯ ಸಂದರ್ಭದಲ್ಲಿಯೇ ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿಯವರು ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿ ಸಭೆಯಿಂದ ಹೊರ ನಡೆದರು. ಕಳೆದ ವರ್ಷ 42 ಲಕ್ಷಕ್ಕೆ ಹರಾಜಾಗಿದ್ದ ಸಂತೆ ಶುಲ್ಕ ವಸೂಲಾತಿಯು ಈ ವರ್ಷ 34. 90 ಲಕ್ಷ ರೂಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು.
ನಾಲ್ಕು ಬಾರಿ ಹರಾಜು ಸಂಬಂಧ ಸಭೆ ಕರೆದಾಗ ಅಂತಿಮವಾಗಿ 35.55 ಲಕ್ಷ ರು ಗೆ ಹರಾಜು ಆಗಿ ನಗರಸಭೆಗೆ 65,000 ರೂ ಲಾಭ ಬರುವುದೆಂದು ಅಂದಾಜಿಸಲಾಗಿತ್ತು ಎಂದು ಪೌರಾಯುಕ್ತ ಎನ್ಎಚ್ ಕುಮ್ಮಣ್ಣನವರ ವಿವರಣೆ ನೀಡಿದರು. ಕಳೆದ ವರ್ಷ ಆದ ಹರಾಜಿಗೂ ಈ ವರ್ಷ ಆದ ಹರಾಜಿಗೂ 6. 50 ಲಕ್ಷ ರು ನಗರಸಭೆಗೆ ಹಾನಿಯಾಗುವುದು. ಈಗ ಈ ಪ್ರಕ್ರೂಟಮೆಂಟ್ ಮೂಲಕ ಹರಾಜು ಮಾಡಿದರೆ ನಗರ ಸಭೆಗೆ ಹೆಚ್ಚಿನ ಲಾಭ ಉಂಟಾಗುವುದು ಎಂದು ಉಪಾಧ್ಯಕ್ಷೆ ಪ್ರಭಾವತಿಯವರು ಹೇಳುತ್ತಲೇ ಸದಸ್ಯರ ಮಧ್ಯೆ ಗದ್ದಲ ಉಂಟಾಯಿತು. ಈ ಮಧ್ಯೆ ಅಧ್ಯಕ್ಷೆ ರೂಪಾರವರು ಉಪಾಧ್ಯಕ್ಷೆಗೆ ತಿಳಿ ಹೇಳಲು ಮುಂದಾದಾಗ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯ ಮಧ್ಯೆ ವಾಗ್ವಾದ ಉಂಟಾಗಿ ಕೊನೆಗೆ ಉಪಾಧ್ಯಕ್ಷರು ಸಭೆಯಿಂದ ಹೊರ ನಡೆದರು. ಹರಾಜು ಸಂಬಂಧ ನಡೆದ ಚರ್ಚೆಯ ಬಳಿಕ ಸಭೆಯು 35. 55 ಲಕ್ಷ ರೂ ಹರಾಜಿಗೆ ಅನುಮೋದನೆ ನೀಡಿತು. ಹರಾಜು ಚರ್ಚೆಯಲ್ಲಿ ಸದಸ್ಯರುಗಳಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಶಶಿಧರ ಬಶೇನಾಯ್ಕರ, ನಾಗರಾಜ ಅಡ್ಮನಿ, ಶೇಖಪ್ಪ ಹೊಸಗೌಡ್ರು, ಹುಚ್ಚಪ್ಪ ಮೆಡ್ಲೇರಿ, ರಮೇಶ ಕರಡಣ್ಷನವರ, ಮಂಜುಳಾ ಹತ್ತಿ ಮತ್ತಿತರರು ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ, ಪೌರಾಯುಕ್ತ ಎನ್ ಎಚ್ ಕುಮ್ಮಣ್ಣನವರ, ಸೇರಿದಂತೆ ಸದಸ್ಯರುಗಳು, ಅಧಿಕಾರಿಗಳು ಇದ್ದರು.