ಶಿವನ ಸ್ಮರಣೆ ಹಾಗೂ ಆಚರಣೆಯೇ ನಿಜವಾದ ಶಿವಾನುಭವ: ಡಾ. ಪ್ರಶಾಂತಸಾಗರ ಶಿವಾಚಾರ್ಯ ಶ್ರೀಗಳು ಗುಗ್ಗರ ಹಟ್ಟಿಯ ಶಿವದೀಕ್ಷಾ ಮಂದಿರದಲ್ಲಿ ಭಕ್ತಿಭಾವದ ಶಿವಾನುಭವ ಮತ್ತು ಭಜನೆ ಕಾರ್ಯಕ್ರಮ
ಬಳ್ಳಾರಿ. ನ. 25 : "ಶಿವನನ್ನು ಸ್ಮರಿಸುವುದು ಮತ್ತು ನಿತ್ಯ ಜೀವನದಲ್ಲಿ ಆಚರಣೆಗೆ ತರುವುದೇ ನಿಜವಾದ ಶಿವಾನುಭವ ಇಡೀ ಆಧ್ಯಾತ್ಮದಲ್ಲಿ ಜೀವ, ಈಶ್ವರ ಹಾಗೂ ಜಗತ್ತಿನ ತತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು" ಎಂದು ಕೂಡ್ಲಿಗಿ ಹಿರೇಮಠದ ಷಽಽ ಬ್ರಽಽ ಶ್ರೀ ಡಾ. ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನದಲ್ಲಿ ತಿಳಿಸಿದರು.
ಅವರು ಮಂಗಳವಾರದಂದು ನಗರದ ಗುಗ್ಗರಹಟ್ಟಿಯ ಶಿವನಗರದಲ್ಲಿರುವ ಶಿವದೀಕ್ಷಾ ಮಂದಿರದಲ್ಲಿ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್’ ವತಿಯಿಂದ ಆಯೋಜಿಸಲಾಗಿದ್ದ ಶಿವಾನುಭವ ಹಾಗೂ ಭಜನೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, "ಭಗವಂತನನ್ನು ಸೇರಲು ನವವಿಧ ಭಕ್ತಿ ಮಾರ್ಗಗಳಿವೆ.
ಅದರಲ್ಲಿ ಭಗವಂತನ ನಾಮಸ್ಮರಣೆ, ಭಕ್ತಿಗೀತೆಗಳು ಹಾಗೂ ಪವಾಡಗಳನ್ನು ಆಲಿಸುವ ’ಶ್ರವಣ ಭಕ್ತಿ’ ಅತ್ಯಂತ ಪ್ರಮುಖವಾದುದು. ತಾಯಿಯಿಂದ ಮಗನಿಗೆ, ಗುರುವಿನಿಂದ ಶಿಷ್ಯನಿಗೆ ಶ್ರವಣ ಭಕ್ತಿಯ ಮೂಲಕವೇ ಆಧ್ಯಾತ್ಮಿಕ ಪರಿವರ್ತನೆ ಸಾಧ್ಯವಾಗುತ್ತದೆ. ದೇವರಲ್ಲಿ ಲೀನವಾಗಲು ಭಜನೆ ಅತ್ಯುತ್ತಮ ಸಾಧನವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಭಜನಾ ಪರಂಪರೆ ಜೀವಂತವಾಗಿರುವುದು.
ಸಂತಸದ ಸಂಗತಿ" ಎಂದರು."ಭಗವಂತ ನಮಗೆ ಗಾಳಿ, ನೀರು ಸೇರಿದಂತೆ ಸಕಲ ಸಂಪತ್ತನ್ನು ನೀಡಿದ್ದಾನೆ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಕೇವಲ ಮನೆಯ ದೀಪ ಬೆಳಗುವುದಷ್ಟೇ ಅಲ್ಲದೆ, ತಮ್ಮ ಸದ್ಗುಣಗಳ ಮೂಲಕ ಇಡೀ ಕುಟುಂಬದ ಜೀವನವನ್ನು ಬೆಳಗಬೇಕು. ಇಂದು ಮಹಿಳೆಯರಿಂದಲೇ ಹಬ್ಬ-ಹರಿದಿನಗಳು ಹಾಗೂ ಧಾರ್ಮಿಕ ಆಚರಣೆಗಳು ಉಳಿದುಕೊಂಡಿರುವುದು ಶ್ಲಾಘನೀಯ.
ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು" ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್ ಹಾಗೂ ಗೋಶಾಲ ಟ್ರಸ್ಟ್ (ರಿ), ಶಿವದೀಕ್ಷಾ ಮಂದಿರದ ಧರ್ಮಾಧಿಕಾರಿಗಳಾದ ಕೆ. ರಾಜಶೇಖರಗೌಡ ದಂಪತಿಗಳು ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.