ಧಾರವಾಡ - ಹುಬ್ಬಳ್ಳಿ

ಸ್ಕೌಟ್ ಮತ್ತು ಗೈಡ್ಸನ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳ ಉದ್ಘಾಟನೆ

ಸ್ಕೌಟ್ ಮತ್ತು ಗೈಡ್ಸನ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳ ಉದ್ಘಾಟನೆ

ಲೋಕದರ್ಶನ ವರದಿ 

           ಧಾರವಾಡ 25 :  ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ಸೇವಾ ಮನೋಭಾವ, ಸ್ವಾವಲಂಬನೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು         ಬೆಳೆಸುವ ಉದ್ದೇಶದಿಂದ ಹಾಗೂ ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮ ದಿನಾಚರಣೆ ಅಂಗವಾಗಿ, ನವೆಂಬರ್ 21, 2026 ರಂದು ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ, ಧಾರವಾಡದಲ್ಲಿ “ಸ್ಕೌಟ್ ಮತ್ತು ಗೈಡ್ಸನ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳ” ಉದ್ಘಾಟನಾ ಸಮಾರಂಭವನ್ನು ಜರುಗಿಸಲಾಯಿತು. 

           ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ತಂಡದ ಕಾರ್ಯನಿರ್ವಹಣೆ, ನಾಯಕತ್ವ ಗುಣಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಸಂಸ್ಥೆ ನಡೆದು ಬಂದ ದಾರಿ ಹಾಗೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಡೆಸುತ್ತಿರುವ ಹಲವು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. 

               ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಎಲ್‌. ಹಂಚಾಟೆ, ಉಪಾಧ್ಯಕ್ಷರು, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌, ಧಾರವಾಡ ಜಿಲ್ಲಾ ಸಂಸ್ಥೆ ಅವರು ತಮ್ಮ ಅತಿಥಿ ಪರ ನುಡಿಗಳಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಯಾವುದೇ ರಾಜಕೀಯ ಪ್ರೇರಿತ ಸಂಘಟನೆಯಲ್ಲ, 1907ರಲ್ಲಿ ಲಾರ್ಡ್‌ ರಾಬರ್ಟ್‌ ಬೇಡನ್‌-ಪೊವೆಲ್ ಅವರಿಂದ ಪ್ರಾರಂಭಿಸಲ್ಪಟ್ಟ ಜಾಗತಿಕ ಯುವ ಚಳವಳಿಯಾಗಿದೆ. ಯುವಜನರಲ್ಲಿ ಶಿಸ್ತು, ನಾಯಕತ್ವ, ಸ್ವಾವಲಂಬನೆ, ನೈತಿಕತೆ, ದೇಶಪ್ರೇಮ ಮತ್ತು ಸೇವಾ ಮನೋಭಾವವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಘಟಕಗಳ ಮೂಲಕ ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ, ಶಿಬಿರ ಜೀವನ, ಪರಿಸರ ಸಂರಕ್ಷಣೆ, ತಂಡದ ಕೆಲಸ, ಸಂಘಟನಾ ಸಾಮರ್ಥ್ಯ, ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಅವಕಾಶ ದೊರೆಯುತ್ತದೆ.

                 ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಸಂಕಷ್ಟದ ಸಂದರ್ಭದಲ್ಲಿ ಇತರರಿಗೆ ನೆರವಾಗುವ ಮನೋಭಾವವನ್ನು ರೂಪಿಸುತ್ತವೆ ಎಂದರು. 

ಮಹಾವಿದ್ಯಾಲಯದ ರೇಂಜರ್ಸ ಘಟಕದ ಸಂಯೋಜಕರಾದ ಸುಜಾತ ಕ್ಷವರದ ಅವರು ಸ್ವಾಗತಿಸಿದರು ಹಾಗೂ ರೋವರ್ಸ ಘಟಕದ ಸಂಯೋಜಕರಾದ ರವಿಕುಮಾರ ವಿ. ಎಸ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ. ಪಲ್ಲವಿ ಭಟ್ ಪ್ರಾರ್ಥಿಸಿದರು. ಕುಮಾರಿ ಪೂರ್ವಿ ಎಸ್‌. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ