ಮಕ್ಕಳಲ್ಲಿ ವ್ಯವಹಾರ ಜ್ಞಾನಾಭಿವೃದ್ಧಿಗೆ ಮಕ್ಕಳ ಸಂತೆ ಪ್ರೇರಣೆ: ಅರಳೀಕಟ್ಟಿ
ಲೋಕದರ್ಶನ ವರದಿ
ಬೈಲಹೊಂಗಲ 17: ಮಕ್ಕಳಲ್ಲಿ ವ್ಯವಹಾರ ಜ್ಞಾನ ಅಭಿವೃದ್ಧಿಗೆ ಮಕ್ಕಳ ಸಂತೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳೀಕಟ್ಟಿ ಹೇಳಿದರು.
ಅವರು ಶನಿವಾರ ಸಮೀಪದ ಗಣಾಚಾರಿ ಶಿಕ್ಷಣ ಸಂಸ್ಥೆಯ ಗಣಾಚಾರಿ ರೂರಲ್ ಕಾನ್ವೆಂಟ್ ಶಾಲೆ ಹಾಗೂ ಪೌಢಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಜೀವನ ನಡೆಸಲು ವ್ಯವಹಾರ ಜ್ಞಾನದ ಅರಿವು ಮೂಡಿಸಬೇಕು. ಪೋಷಕರು ಮಕ್ಕಳನ್ನು ಅಂಗಡಿಗೆ ಕಳುಹಿಸಿದರೆ ವ್ಯಾಪಾರ ಮಾಡಿ ಸಾಮಗ್ರಿ ತರುವ ಶಕ್ತಿ ಬೆಳೆಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಪ್ರಾಯೋಗಿಕವಾಗಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆಗಳು ಉಪಯುಕ್ತವಾಗಿವೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ ಬಿ ಗಣಾಚಾರಿ ಮಾತನಾಡಿ, ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಎಂದರು.
ಮುಖ್ಯೋಪಾಧ್ಯಾಯ ಎಸ್.ಎಂ.ಅಂಬರಶೆಟ್ಟಿ, ಸಿದ್ದಣ್ಣ ಮರಕುಂಬಿ, ಸುನೀಲ ಗೋಡಬೋಲೆ, ಬಸನಗೌಡ ಪಾಟೀಲ, ಸಾವಿತ್ರಿ ಹೊತ್ತಿಗಿಮಠ, ಎಂ.ಡಿ.ಬೆನಚಮರ್ಡಿ, ಎಂ.ಎಲ್.ಪಾಟೀಲ, ಬಿ.ಕೆ.ಪಾಟೀಲ ಇದ್ದರು.
ಸಂತೆಯಲ್ಲಿ ವ್ಯಾಪಾರಕ್ಕಾಗಿ ಗ್ರಾಹಕರನ್ನು ಕೂಗಿ ಕರೆಯುವುದು, ವಸ್ತುಗಳ ವ್ಯಾಪಾರಕ್ಕಾಗಿ ದರದಲ್ಲಿ ಹೆಚ್ಚು ಕಡಿಮೆ ಮಾಡಿ ಚೌಕಾಸಿ ನಡೆಸುವುದು, ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ವಿದ್ಯಾರ್ಥಿಗಳು ಅನುಸರಿಸಿದ ತಂತ್ರಗಳು ಗಮನ ಸೆಳೆದವು. ಲಾಭ ನಷ್ಟಗಳನ್ನು ವಿದ್ಯಾರ್ಥಿಗಳು ಹಾಕಿರುವ ಬಂಡವಾಳಕ್ಕೆ ಅನುಗುಣವಾಗಿ ಶಿಕ್ಷಕರು ಹಂಚಿಕೊಟ್ಟರು. ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಗ್ರಾಹಕರಾಗಿದ್ದರು.
ಶ್ರೀಯಾ ತಿಗಡಿಕರ ನಿರೂಪಿಸಿದರು, ಭಾರತಿ ಓಲೆಕಾರ ಸ್ವಾಗತಿಸಿದರು. ಖುಷಿ ಉಡಕೇರಿ ವಂದಿಸಿದರು