ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಂಕಲ್ಪ ಮಾಡೋಣ: ಡಾ. ಪ್ರಭುಗೌಡ
ದೇವರ ಹಿಪ್ಪರಗಿ 26: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು
.ತಾಲೂಕಿನ ಹುಣಶ್ಯಾಳ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಇದೆ. ನುಡಿದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಗಳಿಸಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕ್ಷೇತ್ರಕ್ಕೆ ಸುಮಾರು 300 ಕೋಟಿ ರೂ. ಅನುದಾನದ ಪ್ರಯೋಜನ ಜನರಿಗೆ ತಲುಪುತ್ತಿದೆ.
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ. ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ ನೀಡಿ ಗೆಲ್ಲಿಸುವ ಕೆಲಸ ಮಾಡೋಣ, ಕ್ಷೇತ್ರದಉಸ್ತುವಾರಿ ವಹಿಸಿಕೊಂಡ ನಂತರ ನಾನು ಜಾತಿ, ಮತ, ಭೇದವಿಲ್ಲದೆ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಪಕ್ಷ ಸಂಘಟಿಸಿದ್ದೇನೆ. '
ಕಾರ್ಯಕರ್ತರು ತೋರಿದ ಪ್ರೀತಿ ಮತ್ತು ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಹುಣಶ್ಯಾಳ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಇಲ್ಲಿನ ಕಾರ್ಯಕರ್ತರು ಶಿಸ್ತಿನಿಂದ ಪಕ್ಷದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನನಗೆ ಆನೆಬಲ ತಂದಿದೆ. ಪಕ್ಷದಲ್ಲಿ ಒಡಕ್ಕಿಲ್ಲ, ಯಾವುದೇ ಗಾಳಿಮಾತುಗಳಿಗೆ ಕಿವಿಗೊಡದೆ ಎಲ್ಲ ನಾಯಕರು ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು.
ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ, ಜಿಲ್ಲೆಯ ನೇತೃತ್ವ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರ ಪ್ರಯತ್ನದಿಂದ ಜಿಲ್ಲೆಯಲ್ಲಿ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದ್ದು, ಅವರು ನೀರಾವರಿ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರ ಅಹ್ಮದ್ ಬೇಪಾರಿ ಮಾತನಾಡಿ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಿ ಗೆಲ್ಲಿಸುವ ಕೆಲಸವನ್ನು ಎಲ್ಲರೂ ಒಗ್ಗಟ್ಟಿನಿಂದ ಮಾಡಬೇಕು ಎಂದರು.
ಮಾಜಿ ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌದರಿ, ಮುಖಂಡರಾದ ಸಂಗಮೇಶ ಛಾಯಾಗೋಳ, ಶರಣಗೌಡ ಪಾಟೀಲ, ಲಕ್ಕಪ್ಪ ಬಡಿಗೇರ ಹಾಗೂ ಜಹಾಂಗೀರ ಸಿರಸಗಿ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಕೊಡಬೇಕಾಗಿದೆ.
ಮುಂಬರುವ ಚುನಾವಣೆಗಳಲ್ಲಿ ಕ್ಷೇತ್ರದ 7 ಜಿಲ್ಲಾ ಪಂಚಾಯಿತಿ ಹಾಗೂ 22 ತಾಲೂಕು ಪಂಚಾಯಿತಿ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು. ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿತ್ತು. ಆದರೆ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದಾರೆ.
ಅವರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹೂ.ಹಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಳ ಸಾಹೇಬಗೌಡ ಪಾಟೀಲ, ಮುಖಂಡರುಗಳಾದ ಆನಂದಗೌಡ ಚಟ್ಟರಕಿ, ಶಂಕ್ರ್ಪ ಬಂಗಾರಗುಂಡ, ಶರಣಪ್ಪ ಪಟ್ಟಣಶೆಟ್ಟಿ, ಮೈನುದ್ದೀನ ಬಾಗವಾನ, ಶಫೀಕ್ ಸಿಪಾಯಿ, ಬಿ.ಬಿ.ಕೊಣ್ಣೂರ, ಜಗದೀಶ ಪಾಟೀಲ, ಅಣ್ಣಾರಾಯಗೌಡ ಪಾಟೀಲ, ದಾವಲಸಾಬ ನಾಯ್ಕೋಡಿ,
ಪ್ರಭುಗೌಡ ಪಾಟೀಲ, ಬಾಬುಗೌಡ ಪಾಟೀಲ, ಭೀಮನಗೌಡ ಪಾಟೀಲ, ಬಂದಗಿಸಾಬ ವಠಾರ, ಮಹಾಂತೇಶ ಮುರಕನಾಳ, ಸಾಹೇಬಗೌಡ ಪುರದಾಳ, ಸಾಯಿಕುಮಾರ ಸಲಾದಳ್ಳಿ, ಡಿ.ಕೆ.ಬಡೇಗರ, ರಾಜು ವಾಲಿಕಾರ ಸೇರಿದಂತೆ ಹುಣಶ್ಯಾಳ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.