ಸಮುದಾಯ ಭವನಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವೇದಿಕೆಯಾಗಬೇಕು: ಶಾಸಕ ಬಸವರಾಜ ಶಿವಣ್ಣನವರ
ಬ್ಯಾಡಗಿ 26: ಸಮುದಾಯ ಭವನಗಳು ಕೇವಲ ಸಭೆ, ಸಮಾರಂಭಗಳಿಗೆ ಸೀಮಿತವಾಗದೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಮುಖ ವೇದಿಕೆಯಾಗಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಪಟ್ಟಣದ ರಟ್ಟಿಹಳ್ಳಿ ರಸ್ತೆಯಲ್ಲಿ ಇದ್ದ ಕಲಾಭವದ ಜಾಗದಲ್ಲಿ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಮರು ನಿರ್ಮಾಣವಾಗುತ್ತಿರುವ ಕನಕದಾಸರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ಜನರು ಒಗ್ಗಟ್ಟಿನಿಂದ ಒಂದೆಡೆ ಸೇರಿ ತಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಲು ಸಮುದಾಯ ಭವನಗಳು ಸಹಕಾರಿಯಾಗುತ್ತವೆ. ಯುವಜನರಿಗೆ ಶೈಕ್ಷಣಿಕ ಚಟುವಟಿಕೆ, ಪ್ರತಿಭಾ ಪುರಸ್ಕಾರ, ಸಭೆ-ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಇಂತಹ ಭವನಗಳು ಅನುಕೂಲ ಕಲ್ಪಿಸುತ್ತವೆ ಎಂದರು.ಕ್ಷೇತ್ರದ ಅಭಿವೃದ್ಧಿಯ ಜತೆಗೆ ಎಲ್ಲ ಸಮಾಜಗಳಿಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ವಿಭಾಗದ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ. ತಹಶೀಲ್ದಾರ್ ಸಾರಿಕಾ ಶಿಂಗನಮಕ್ಕಿ.ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಯಪ್ಪಗೋಳ.ಮುಖಂಡ ಅಬ್ದುಲ್ ಮುನಾಫ್ ಯರೇಸಿಮಿ.ಚನ್ನಬಸಪ್ಪ ಹುಲ್ಲತ್ತಿ. ದುರ್ಗೇಶ ಗೋಣೆಮ್ಮನವರ. ನಜೀರ್ ಅಹ್ಮದ್ ಶೇಕ್ .ಜೈ ಭೀಮ್ ರಾರಾವಿ. ಗುತ್ತಿಗೆದಾರ ಬಸವರಾಜ್ ಕುಂಬಾರ್ ಹಾಗೂ ಪಕ್ಷದ ಮುಖಂಡರು ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.