ಹಾವೇರಿಯಲ್ಲಿ 8.5 ಅಡಿ ಎತ್ತರದ ಕನಕದಾಸರ ಭವ್ಯ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧತೆ
ಲೋಕದರ್ಶನ ವರದಿ
ಹಾವೇರಿ: ನಗರದ ಹಳೆಯ ಪಿ.ಬಿ. ರಸ್ತೆಯ ಸಮೀಪ, ಕಾಗಿನೆಲೆ ರಸ್ತೆಗೆ ಹೊಂದಿಕೊಂಡಿರುವ ಕನಕದಾಸ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಸಂತಶ್ರೇಷ್ಠ ಕನಕದಾಸರ 8.5 ಅಡಿ ಎತ್ತರದ ಭವ್ಯ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆದಿವೆ.
ಇದೇ ನವೆಂಬರ್ 27ರಂದು ನಡೆಯಲಿರುವ ಕನಕ ಜಯಂತ್ಯುತ್ಸವದ ಶುಭ ಸಂದರ್ಭದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಲವು ವರ್ಷಗಳ ಕನಸು ನನಸಾಗುತ್ತಿರುವುದಕ್ಕೆ ಕನಕದಾಸರ ಅಭಿಮಾನಿಗಳು ಹಾಗೂ ಸಮುದಾಯದ ಜನರಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ.
ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಡಾ. ನಿರಂಜನಾನಂದಪುರಿ ಮಹಾಸ್ವಾಮೀಜಿಗಳ ಹಾಗೂ ಬ್ಯಾಡಗಿ ಕ್ಷೇತ್ರದ ಶಾಸಕ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಮಾರ್ಗದರ್ಶನದಲ್ಲಿ ಜಿಲ್ಲಾ ಹಾಗೂ ತಾಲೂಕು ಕುರುಬರ ಸಂಘದ ಪದಾಕಾರಿಗಳು ಮತ್ತು ಸಮುದಾಯದ ಮುಖಂಡರು ಒಗ್ಗೂಡಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಾಗರಾಜ ಆನ್ವೇರಿ, ಕನಕದಾಸ ಉಣ್ಣೆ ಉತ್ಪಾದಕರ ಸಹಕಾರಿ ಮಾರಾಟ ಮಳಿಗೆಯ ಅಧ್ಯಕ್ಷ ಹಾಗೂ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಅಶೋಕ ಬಣಕಾರ ಸೇರಿದಂತೆ ಹಲವು ಮುಖಂಡರು ಮುತುವರ್ಜಿ ವಹಿಸಿದ್ದರು, ಸಮುದಾಯದ ಸಂಘಟಿತ ಪ್ರಯತ್ನದಿಂದ ಈ ಮಹತ್ವದ ಕಾರ್ಯ ಸಾಕಾರಗೊಳ್ಳುತ್ತಿದೆ.
ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಸನ್ನಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕನಕದಾಸರ ಕಂಚಿನ ಮೂರ್ತಿಯನ್ನು ನಿರ್ಮಿಸಿದ ಬಿಡದಿಯ ಖ್ಯಾತ ಶಿಲ್ಪಿ ವಿಜಯ್ ಅವರೇ ಹಾವೇರಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಈ ಮೂರ್ತಿಯನ್ನೂ ಸುಂದರವಾಗಿ ರೂಪಿಸಿದ್ದಾರೆ. 8.5 ಅಡಿ ಎತ್ತರದ ಈ ಕಂಚಿನ ಮೂರ್ತಿ ನಗರದ ಆಕರ್ಷಣೆಯ ಕೇಂದ್ರವಾಗುವುದರ ಜೊತೆಗೆ ಸಂತ ಕನಕದಾಸರ ಜೀವನಾದರ್ಶ, ಭಕ್ತಿ, ಸಮಾನತೆ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಲಿದೆ.
ಹಾವೇರಿ ನಗರದಲ್ಲಿ ಕನಕದಾಸರ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂಬುದು ಈ ಭಾಗದ ಜನತೆ ಹಾಗೂ ಕನಕದಾಸರ ಅಭಿಮಾನಿಗಳ ಹಲವು ವರ್ಷಗಳ ಆಶಯವಾಗಿತ್ತು. ಇದೀಗ ಆ ಆಶಯ ನನಸಾಗುತ್ತಿರುವುದು ಸಮುದಾಯದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ಕನಕದಾಸರ ಜಯಂತಿಯ ಸಂದರ್ಭದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ನಡೆಯುತ್ತಿರುವುದು ವಿಶೇಷ ಮಹತ್ವ ಪಡೆದಿದ್ದು, ಮುಂದಿನ ಪೀಳಿಗೆಗೆ ಕನಕದಾಸರ ತತ್ವಾದರ್ಶಗಳನ್ನು ಪರಿಚಯಿಸುವ ಸ್ಮರಣೀಯ ಕಾರ್ಯವಾಗಿ ಮೂಡಿಬರಲಿದೆ. ಈ ಮೂಲಕ ಹಾವೇರಿ ನಗರದಲ್ಲಿ ಕನಕದಾಸರ ಕೀರ್ತಿ, ಕೀರ್ತನೆ ಹಾಗೂ ಸಮಾನತೆಯ ಸಂದೇಶಕ್ಕೆ ಮತ್ತೊಂದು ಗೌರವದ ಸ್ಮಾರಕ ನಿರ್ಮಾಣವಾಗಲಿದೆ.