ಯೋಗದಿಂದ ರೋಗ ದೂರ: ಅಜೀತಕುಮಾರ ದೇಸಾಯಿ
ಯರಗಟ್ಟಿ 22: ಪಟ್ಟಣದ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎನ್ಸಿಸಿ ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಆಚರಿಸಲಾಯಿತು.
ಯೋಗವು ಮೂಲಭೂತವಾಗಿ ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಕ ಶಿಸ್ತು ಕ್ರಮವಾಗಿದೆ. ಇದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನವಾಗಿದೆ. ಯೋಗ ಎಂಬ ಪದವು ಸಂಸ್ಕೃತ ಮೂಲ “ಯುಜ್” ನಿಂದ ಬಂದಿದೆ. ಇದರರ್ಥ ಸೇರಲು ಅಥವಾ ನೂಗಕ್ಕೆ ಅಥವಾ ಒಗ್ಗೂಡಿಸಲು ಎಂದುದಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಎಸ್. ಕುರುಬಗಟ್ಟಿಮಠ ಹೇಳಿದರು.
ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ಕೃ. ದೇಸಾಯಿ ಮಾತನಾಡಿ ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠ ಯೋಗ ಪತಂಜಲಿಯ ಯೋಗಸೂತ್ರಗಳಲ್ಲಿ ಪ್ರಸ್ತಾಪವಾಗಿರುವ ಹಾಗೂ ಹಿಂದೂ ತತ್ವಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು. ಅನೇಕ ಇತರ ಹಿಂದೂ ಗ್ರಂಥಗಳು ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖಗಳನ್ನು ಚರ್ಚಿಸುತ್ತವೆ. ಯೋಗದಿಂದ ರೋಗವನ್ನು ದೂರ ಮಾಡಬಹುದು. ಯೋಗದಿಂದ ಎಲ್ಲ ವಯೋಮಾನದವರು ಕೂಡ ಕ್ರಿಯಾಶೀಲರಾಗುತ್ತಾರೆ. ಪ್ರಾಣಾಯಾಮ, ಧ್ಯಾನ, ಯೋಗದಿಂದ ಮನಸ್ಸು ಪ್ರಫುಲ್ಲವಾಗುತ್ತದೆ ಎಂದರು.
ಪಟ್ಟಣದ ಬಸವೇಶ್ವರ ಪ್ರೌಢ ಶಾಲೆ, ಸರಕಾರಿ ಕನ್ನಡ ಮಾದರಿ ಶಾಲೆ, ಕರ್ನಾಟಕ ಪೂರ್ವ ಪ್ರಾಥಮಿ ಶಾಲೆ, ವಿಶ್ವಕರ್ಮ ಪೂರ್ವ ಪ್ರಾಥಮಿ ಶಾಲೆ, ಬಾಲಾಜಿ ಪ್ರೌಢ ಶಾಲೆ, ಸೋಮಲಿಂಗಪ್ಪ ಬ. ಜಕಾತಿ ಪದವಿ ಪೂರ್ವ ಕಾಲೇಜು, ಎಸ್. ಬಿ. ದೇಸಾಯಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಪಟ್ಟಣ ಪಂಚಾಯತ ನಾಮರ್ನಿದೇಶಕ ಸದಸ್ಯರಾದ ಮಹಾಂತೇಶ ಜಕಾತಿ, ವಿಶಾಲಗೌಡ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಟಿ. ಎಂ. ಕಾವಣ್ಣವರ, ದೇವೆಂದ್ರ ಕಮ್ಮಾರ, ಡಾ. ವಿಶ್ವನಾಥ ತಾವಂಶಿ, ಡಾ. ವಿ. ಎಂ. ಪಟ್ಟಣ, ಆಯ್. ಈ. ಬೆಣ್ಣಿ, ಮೋಹನ ಹಾದಿಮನಿ, ಗುರುಪ್ರಸಾದ ಹಿರೇಮಠ, ಬಸವರಾಜ ತೋರಗಲ್ಲ, ಶಿಕ್ಷಕರು ಸೇರಿದಂತೆ ಇತರರು ಇದ್ದರು.
ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಯೋಗಪಟುಗಳು, ಸಾರ್ವಜನಿಕರು, ಪಟ್ಟಣ ಪಂಚಾಯತಿ ಸದಸ್ಯರು, ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು. ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯೋಗ ಪ್ರದರ್ಶನ ನೀಡಿದರು.