ವಿವಸ್ತ್ರಗೊಳಿಸಿ ಮಹಿಳೆಯ ಹಲ್ಲೆ: ಮೂಕಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಂದ ದಂಡ ವಸೂಲಿ
ಬೈಲಹೊಂಗಲ 18: ದೇಶದಲ್ಲಿ ತೀವೃ ಗಮನ ಸೆಳೆದ ವಂಟಮೂರಿ ಗ್ರಾಮದ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಮೂಕಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಂದ ದಂಡ ವಸೂಲಿ ಮಾಡಿ ಸಂತ್ರಸ್ಥೆಗೆ ನೀಡುವಂತೆ ಉಚ್ಚ ನ್ಯಾಯಾಲಯ ಆದೇಶ ಮಾಡಿರುವದು ನಾಗರಿಕ ಸಮಾಜದಲ್ಲಿ ಜನರ ಕರ್ತವ್ಯವನ್ನು ನೆನಪಿಸಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಅವರು ಮಾಧ್ಯಮದವರ ಜೊತೆ ಮಾತನಾಡಿ, ಇತ್ತೀಚಿಗೆ ಇಡೀ ಸಮಾಜವೇ ತಲೆ ತಗ್ಗಿಸುವ ಹೀನ ಕೃತ್ಯ ನಡೆದಿದ್ದು ಅಕ್ಷಮ್ಯ ಅಪರಾಧವಾಗಿದೆ. ಈ ಪ್ರಕರಣವನ್ನು ಉಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ರಾಜ್ಯ ಸರಕಾರಕ್ಕೆ ಚಾಟಿ ಬೀಸಿ ಮಹಾಭಾರತದ ದ್ರೌಪತಿ ವಸ್ತ್ರಾಪಹರಣಕ್ಕಿಂತ ಕೆಟ್ಟದಾದ ಪ್ರಕರಣ ಇದಾಗಿದ್ದು ಪ್ರಜಾಪ್ರಭುತ್ವದ ದೇಶದೊಂದರಲ್ಲಿ ಆಧುನಿಕ ತಂತ್ರಜ್ಞಾನ ಮಾಧ್ಯಮ ಕಠಿಣ ಕಾನೂನುಗಳು ಇದ್ದಾಗಲೂ ಇಂಥಹ ಪುಂಡಾಟಿಕೆಯನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡು ತನಿಖೆಯ ಸಂಪೂರ್ಣ ವರದಿ ನೀಡಲು ಸೂಚಿಸಿತು.
ಮುಂದುವರೆದು ವಿಚಾರಣೆಯಲ್ಲಿ ಜನ ಸಾಮಾನ್ಯರು ಕೇವಲ ಸೌಲಭ್ಯಗಳನ್ನು ಪಡೆದುಕೊಳ್ಳುವದು ತಮ್ಮಷ್ಟಕ್ಕೆ ತಾವೇ ಸಮಾಜದಲ್ಲಿ ಜೀವನ ಸಾಗಿಸುವದಲ್ಲ. ತಮ್ಮ ಸುತ್ತಮುತ್ತ ನಡೆಯುವ ಅಪರಾಧಿಕ ಕೃತ್ಯಗಳನ್ನು ತಡೆಗಟ್ಟುವ ಕರ್ತವ್ಯ ನಾಗರಿಕರದ್ದಾಗಿದೆ ಎಂಬುವದನ್ನು ಉಚ್ಚ ನ್ಯಾಯಾಲಯ ತಿಳಿಸಿದೆ.
ಇಂತಹ ಹೀನ ಕೃತ್ಯಗಳನ್ನು ತಡೆಗಟ್ಟದ ಮೂಕ ಪ್ರೇಕ್ಷಕರಾದ ಜನತೆಗೆ ದಂಡ ಕಟ್ಟಲು ಆದೇಶಿಸಿರುವದು ಸಮಾಜದಲ್ಲಿ ಪ್ರಜೆಗಳ ಕರ್ತವ್ಯವನ್ನು ಜಾಗೃತಗೊಳಿಸಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿರುವದು ಸ್ವಾಗತಾರ್ಹ ಎಂದರು.