ವೀಕೆಂಡ್ ಲಾಕ್ಡೌನ್: ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್
ಇಂಡಿ08: ಕೋವಿಡ್-19 ಕಾರಣದಿಂದ ರಾಜ್ಯ ಸರಕಾರ ವಾರಾಂತ್ಯ ಲಾಕ್ಡೌನ್ ಹೇರಿದ ಪರಿಣಾಮ ಶನಿವಾರ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಆದರೂ ಸಹ ಸಾರ್ವಜನಿಕರು ಎಂದಿನಂತೆ ಪಟ್ಟಣದಲ್ಲಿ ಹಲವು ಜನರು ಓಡಾಡುವುದು ಕಂಡು ಬಂದಿತು. ಎಂದಿನಂತೆ ಬಸ್ ಸಂಚಾರ ಚಲಾವಣೆಯಲ್ಲಿದ್ದರೂ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಅತೀ ವಿರಳವಾಗಿತ್ತು. ಪ್ರತೀ ದಿನ 90 ಬಸ್ಗಳು ಓಡಾಟ ಮಾಡುತ್ತಿದ್ದವು ಇಂದು ಕೇವಲ 26 ಬಸ್ಗಳು ಓಡಾಟ ಆರಂಭಿಸಿದ್ದವು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಇಲಾಖೆಯವರು ಬ್ಯಾರಿಕೇಡ್ ಹಾಕಿ ಬೆಳಿಗ್ಗೆ ಎರಡು ಘಂಟೆಗಳ ಕಾಲ ವಾಹನಗಳನ್ನು ತಡೆದು ಸಾರ್ವಜನಿಕರಿಗೆ ಹೊರಗಡೆ ಬರದಂತೆ ಎಚ್ಚರಿಕೆ ನೀಡಿದರು. ಅಲ್ಲದೆ ಕೆಲ ದ್ವಿಚಕ್ರ ವಾಹನ ಸವಾರರನ್ನು ತಡೆದು ಠಾಣೆಗೆ ಕರೆದೊಯ್ದು ಒಂದು ಘಂಟೆಗಳ ಕಾಲ ಠಾಣೆಯಲ್ಲಿ ನಿಲ್ಲಿಸಿ ಬಿಟ್ಟು ಕಳಿಸಿದರು.
ಬಹುತೇಕ ಅಂಗಡಿಕಾರರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವೀಕೆಂಡ್ ಲಾಕ್ಡೌನ್ಗೆ ಸಹಕರಿಸಿದರು.
ಸರಕಾರ ವೀಕೆಂಡ್ ಲಾಕ್ಡೌನ್ ಘೋಷಿಸಿದ್ದು ಜನರ ಪ್ರಾಣ ಕಾಪಾಡಲು. ಹೀಗಾಗಿ ಜನರು ಹೊರಗಡೆ ಅಡ್ಡಾಡಬಾರದು, ಅಗತ್ಯ ವಸ್ತುಗಳಿಗೆ ಅವಕಾಶವಿದೆ. ಸುಖಾ ಸುಮ್ಮನೆ ಹೊರಗಡೆ ಅಡ್ಡಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಸರಕಾರದ ನಿಯಮವನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು.
ಭೀಮನಗೌಡ ಬಿರಾದಾರ,
ಇಂಡಿ ಶಹರ ಠಾಣಾಧಿಕಾರಿ.