ಮೋಕಾ ಗ್ರಾಮದ ಸೇತುವೆ ಕೆಳಗಡೆ ನೀರು: ರಸ್ತೆ ಸಂಚಾರ ಅಸ್ತವ್ಯಸ್ಥ- ಜಿಲ್ಲಾಧಿಕಾರಿಗಳಿಗೆ ಮನವಿ
ಬಳ್ಳಾರಿ 08: ತಾಲೂಕಿನ ಹೊಸ ಮೋಕಾ ಸೇತುವೆ ಕೆಳಗೆಡೆ ಗೋಟೂರು, ಕೆ.ಕೆ.ಹಾಳು, ಬಾಣಾಪುರ ಹಾಗೂ ಮುಂದಿನ ಗ್ರಾಮಗಳಿಗೆ ಹೋಗುವ ರಸ್ತೆಯಲ್ಲಿ ನೀರು ನಿಂತು ವಾಹನಸವಾರರಿಗೆ ತೊಂದರೆಯಾಗುತ್ತಿದೆ ಎಂದು ಕ.ರ.ವೇ ಬಳ್ಳಾರಿ ಗ್ರಾಮಾಂತರ ತಾಲೂಕು ಅಧ್ಯಕ್ಷ.ಕೆ.ಪೊಂಪನಗೌಡ ಅವರು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕೋಪಯೋಗಿ ಅಭಿಯಂತರರಿಗೆ ಮತ್ತು ಸಹಾಯಕ ಅಭಿಯಂತರರಿಗೆ ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಿಂದ ಮುಂದಿನ ಗ್ರಾಮಗಳಾದ ಗೋಟೂರು, ಗೊಟೂರು ಕ್ಯಾಂಪ್, ಕೆ.ಕೆ.ಹಾಳು, ಬಾಣಾಪುರ, ವಣೀನೂರು, ಕರ್ಚೇಡು, ಬಸರುಕೋಡು, ಹಿರೇಹಡ್ಲಿಗಿ, ಗಡಿನಾಡು ಪ್ರದೇಶದ ಗೂಳ್ಯಂ, ವಿವಿಧ ಗ್ರಾಮಗಳಿಗೆ ತೆರೆಳುವ ಮುಖ್ಯರಸ್ತೆಯಾಗಿದ್ದು, ಮೋಕಾ ಗ್ರಾಮದ ಸೇತುವೆ ಕೆಳಗಡೆ ಹೊಲ-ಗದ್ದೆಗಳಿಗೆ ಮಳೆ ನೀರು ಬಂದು ಸಂಪೂರ್ಣವಾಗಿ ಸೇತುವೆ ಕೆಳಗೆಡೆ ನಿರಂತರವಾಗಿ ಸುಮಾರು 2 ರಿಂದ 3 ಅಡಿಗಳವರೆಗೆ ಶೇಖರಣೆಗೊಂಡು ಸದರಿ ಪ್ರದೇಶದಿಂದ ಯಾವುದೇ ವ್ಯಕ್ತಿಗಳು ವಾಹನಗಳಲ್ಲಿ ದ್ವಿಚಕ್ರ ಹಾಗೂ ಸೈಕಲ್ ಹಾಗೂ ವಾಹನಗಳು ಕೂಡ ತೆರಳುವುದಕ್ಕೆ ಆಸಾಧ್ಯವಾದ ಸ್ಥಿತಿ ಉಂಟಾಗಿದೆ ಎಂದು ತಾಲೂಕು ಅಧ್ಯಕ್ಷ ಕೆ.ಪೊಂಪನ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸದರಿ ಪ್ರದೇಶದಲ್ಲಿ ನೀರಿನಲ್ಲಿ ಬಿದ್ದು, ಹಲವಾರು ಅಪಘಾತಗಳು ಉಂಟಾಗಿರುತ್ತವೆ. ಹಾಗೂ ಪ್ರದೇಶದಿಂದ ಶಾಲೆ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು, ತುರ್ತು ಪರಿಸ್ಥಿತಿ ಅಂಬುಲೆನ್ಸ್ ಹಾಗೂ ಇತರೇ ಸೇವೆಗಳು ಒದಗಿಸುವುದಕ್ಕೆ ಸಹ ಸಾಕಷ್ಟು ಪರದಾಡುವ ಸ್ಥಿತಿ ಕಂಡುಬರುತ್ತಿದೆ. ಬಳ್ಳಾರಿಗೆ, ಮೋಕಾ ಗ್ರಾಮಕ್ಕೆ ಬರುವ ಸಂಪರ್ಕ ರಸ್ತೆ ಇದೊಂದು ರಸ್ತೆ ಹೊರತುಪಡಿಸಿ ಬೇರೆ ಯಾವುದೇ ರಸ್ತೆ ಸಂಪರ್ಕ ಸಹ ಇರುವುದಿಲ್ಲ. ಕೆಲವು ವಿದ್ಯಾರ್ಥಿಗಳು ಮಳೆಗಾಲದಲ್ಲಿ ಅಡ್ಡಿಉಂಟಾಗಿ ಅಪಘಾತವಾಗಿ ಹಲವಾರು ಪರೀಕ್ಷೆಗಳನ್ನು ಬರೆಯದೇ ಇರುವ ಪ್ರಕರಣಗಳು ಸಹ ಆಗಿರುತ್ತವೆ. ಅದು ಅಲ್ಲದೇ ತುರ್ತು ಸೇವೆ ವಾಹನ ಸರಿಯಾದ ಸಮಯಕ್ಕೆ ರಸ್ತೆಯ ತೊಂದರೆಯಿಂದಾಗಿ ಬಾರದೇ ಹಲವಾರು ಜನರು ಸಾವನ್ನಪ್ಪಿರುವ ಘಟನೆ ಸಹ ನಡೆದಿರುತ್ತದೆ. ಈ ಪ್ರದೇಶದಲ್ಲಿ ಬಿದ್ದು ಅಪಘಾತವಾಗಿರುವ ವ್ಯಕ್ತಿಗಳು ಮೂಳೆಗಳನ್ನು ಮುರಿದುಕೊಂಡಿರುತ್ತಾರೆ.
ಕಾರಣ ಶೀಘ್ರವಾಗಿ ಸದರಿ ಪ್ರದೇಶದಲ್ಲಿ ನೀರು ನಿಲ್ಲದಂತೆ ಸಾರಾಗವಾಗಿ ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಈ ಮನವಿಯನ್ನು ತಕ್ಷಣವೇ ಸ್ಪಂದಿಸಿ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಈ ಕುರಿತು ಮುಂದಿನ ದಿನ ಉಗ್ರ ಹೋರಾಟ ಮಾಡಲಾಗುವುದೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮಾಂತರ ತಾಲೂಕು ಕರವೇ ರೈತ ಘಟಕ ಅಧ್ಯಕ್ಷ ಗೋಟೂರು ರಾಮಕೃಷ್ಣ, ಗ್ರಾಮ ಘಟಕ ಅಧ್ಯಕ್ಷ ಮಂಜುನಾಥ ಅಚಾರಿ ಬಸರುಕೋಡು, ಗೌರವಾಧ್ಯಕ್ಷ ಬಸಯ್ಯ ಸ್ವಾಮಿ, ಅಂಜಿನೇಯ, ಗಂಗಾಧರ, ನಣಿಕ್ಯಪ್ಪನವರ ಚಂದ್ರ್ಪ ಮುಂತಾದವರು ಉಪಸ್ಥಿತರಿದ್ದರು.