ಬಳ್ಳಾರಿ: ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿ ಮಾರಾಟಕ್ಕೆ ನಿಷೇಧ; ತಾಲ್ಲೂಕುವಾರು ಕಣ್ಗಾವಲು ಸಮಿತಿಗಳ ರಚನೆ
ಬಳ್ಳಾರಿ,ನ.06: ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ ಹಾಗೂ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುತ್ತೋಲೆಯನ್ವಯ ವಾಯುಮಾಲಿನ್ಯ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿಗೂ ವಿಶೇಷ ಅಧಿಕಾರಿಗಳ ಜಂಟಿ ತಪಾಸಣಾ ತಂಡಗಳನ್ನು ರಚಿಸಲಾಗಿದೆ. *ತಾಲ್ಲೂಕುವಾರು ತಂಡಗಳ ರಚನೆ:* ಬಳ್ಳಾರಿ: ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಡಿವೈಎಸ್ಪಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ, ಜೆಸ್ಕಾಂ, ತಾಲ್ಲೂಕು ಪಂಚಾಯತಿ ಇಒ ಮತ್ತು ಪರಿಸರ ಅಧಿಕಾರಿಗಳನ್ನೊಳಗೊಂಡ ತಂಡ.
ಸಿರುಗುಪ್ಪ, ಸಂಡೂರು, ಕಂಪ್ಲಿ ಮತ್ತು ಕುರುಗೋಡು: ಆಯಾ ತಾಲ್ಲೂಕಿನ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಪೊಲೀಸ್ ನೀರೀಕ್ಷಕರು, ಪುರಸಭೆ/ನಗರಸಭೆ ಮುಖ್ಯಾಧಿಕಾರಿಗಳು, ಅಗ್ನಿಶಾಮಕ ಠಾಣಾಧಿಕಾರಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಜೆಸ್ಕಾಂ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ನಿಯೋಜಿಸಲಾಗಿದೆ. *ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆಗಳು:* ಅನಧಿಕೃತ ಮಳಿಗೆಗಳ ಪರೀಶೀಲನೆ: ಜಿಲ್ಲೆಯಾದ್ಯಂತ ಅನಧಿಕೃತವಾಗಿ ಪಟಾಕಿ ಸಂಗ್ರಹ ಅಥವಾ ಮಾರಾಟ ಮಾಡುವ ಅಂಗಡಿ ಹಾಗೂ ಗೋದಾಮುಗಳನ್ನು ಜಂಟಿಯಾಗಿ ಪರೀಶೀಲಿಸಿ ವರದಿ ನೀಡಬೇಕು.
ಲೈಸೆನ್ಸ್ ಮತ್ತು ಸುರಕ್ಷತೆ: ಹೊಸದಾಗಿ ಲೈಸೆನ್ಸ್ ನೀಡುವ ಹಾಗೂ ನವೀಕರಣ ಮಾಡುವ ಮೊದಲು ಕಡ್ಡಾಯವಾಗಿ ಸ್ಥಳ ಪರೀಶೀಲನೆ ನಡೆಸಬೇಕು. ಮಳಿಗೆಗಳಲ್ಲಿ ಅಗ್ನಿ ಮತ್ತು ವಿದ್ಯುತ್ ಸುರಕ್ಷತಾ ನಿಯಮಗಳು ಪಾಲನೆಯಾಗುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಹಸಿರು ಪಟಾಕಿ ಮತ್ತು ಕ್ಯೂಆರ್ ಕೋಡ್ ಕಡ್ಡಾಯ: ತಾತ್ಕಾಲಿಕ ಮಳಿಗೆಗಳಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿಸಬೇಕು. ಪಟಾಕಿ ಪೊಟ್ಟಣಗಳ ಮೇಲೆ ಹಸಿರು ಪಟಾಕಿಗಳ ಅಧಿಕೃತ ಚಿಹ್ನೆ ಹಾಗೂ ’ಕ್ಯೂಆರ್ ಕೋಡ್’ ಇರುವುದನ್ನು ಪರೀಶೀಲಿಸಬೇಕು.
ಕಾನೂನು ಕ್ರಮ: ಜಿಲ್ಲಾಡಳಿತದ ಪರವಾನಗಿ ಇಲ್ಲದೆ ಅಥವಾ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡುವವರ ವಿರುದ್ಧ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಅನುಪಾಲನಾ ವರದಿ ಸಲ್ಲಿಸಬೇಕು. ನಿಯೋಜಿತ ತಂಡದ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ತಕ್ಷಣದಿಂದಲೇ ಕ್ಷೇತ್ರ ಭೇಟಿ ಕೈಗೊಂಡು, ಮಳಿಗೆಗಳ ಸುರಕ್ಷತಾ ವ್ಯವಸ್ಥೆಯನ್ನು ಪರೀಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ.