ವಿಜಯಾನಂದ ಶ್ರೀಗಳ ಕಾರ್ಯ ಶ್ಲಾಘನೀಯ: ಎಚ್.ಕೆ.ಪಾಟೀಲ
ಲೋಕದರ್ಶನ ವರದಿ
ಬೈಲಹೊಂಗಲ 17: ಬೇವಿನಕೊಪ್ಪ ಆನಂದಾಶ್ರಮದ ಭಕ್ತಾಧಿಗಳಿಗೆ ಯಾತ್ರಿ ನಿವಾಸ ಮಂಜೂರ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಶನಿವಾರ ತಾಲೂಕಿನ ಬೇವಿನಕೊಪ್ಪ ಗ್ರಾಮದ ಆನಂದಾಶ್ರಮದಲ್ಲಿ ನಡೆದ ನೂತನ ನಿತ್ಯಕಾರುಣ್ಯ ನಿಲಯದ ನವಗ್ರಹ ಶಾಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಜಯಾನಂದ ಶ್ರೀಗಳು ಪುಟ್ಟ ಬೇವಿನಕೊಪ್ಪ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಆರ್ಯುವೇದಿಕ ಆಸ್ಪತ್ರೆ ಸ್ಥಾಪಿಸಿ ನೂರಾರು ಜನರಿಗೆ ಜನೋಪಯೋಗಿ ಕಾರ್ಯ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಸಂಪೂರ್ಣ ಸಹಕಾರ ನೀಡುವದಲ್ಲದೇ ಭಕ್ತರ ಬಹು ದಿನದ ಬೇಡಿಕೆಯಂತೆ ಯಾತ್ರಿ ನಿವಾಸವನ್ನು ಶಾಸಕರೊಂದಿಗೆ ಚಚರ್ಿಸಿ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಬೇವಿನಕೊಪ್ಪ ಮತ್ತು ಸಂಗೊಳ್ಳಿ ಮಾರ್ಗ ಮಧ್ಯೆ ರಾಯಣ್ಣ ಸೇತುವೆ ನಿರ್ಮಾಣಕ್ಕೆ ರೂ.40 ಕೋಟಿ ಮಂಜೂರು ಮಾಡುವಲ್ಲಿ ಎಚ್.ಕೆ.ಪಾಟೀಲ ಅವರ ಪಾತ್ರ ಹಿರಿದಾಗಿದೆ. ಅಲ್ಲದೇ ಅಮಟೂರ ಗ್ರಾಮದಲ್ಲಿ ವೀರಕೇಸರಿ ಅಮಟೂರ ಬಾಳಪ್ಪ ಸ್ಮಾರಕ ಭವನ ನಿರ್ಮಿಸುವಲ್ಲಿ ಅವರ ಕೊಡುಗೆ ಅಪಾರವಾಗಿದ್ದು ಈ ನಿಟ್ಟಿನಲ್ಲಿ ಅವರಿಗೆ ಈ ಗ್ರಾಮಸ್ಥರ ಪರವಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.ಸೋಮನಗೌಡ ಪಾಟೀಲ, ಮಲ್ಲಪ್ಪ ಮುರಗೋಡ, ಮಹಾಂತೇಶ ಮರೇಕ್ಕನವರ, ರಮೇಶ ಜಂಗಲ, ಮಲ್ಲಿಕಾರ್ಜುನ ಪೂಜೇರಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು