ಲಸಿಕಾ ಅಭಿಯಾನ: ಶೇ.93 ರಷ್ಟು ಪ್ರಗತಿ ಸಾಧನೆ
ಬೈಲಹೊಂಗಲ 24: ಕೋವಿಡ್ -19 ಲಸಿಕಾ ಅಭಿಯಾನ ಕಾರ್ಯದಲ್ಲಿ ಬೈಲಹೊಂಗಲ ತಾಲೂಕಿನ ಗುರಿ 2.83,169 ಗುರಿಯನ್ನು ಹೊಂದಿದ್ದು ದಿ.22-11-2021 ರವರೆಗೆ 2,54,957 ಮೊದಲನೆಯ ಡೋಸನ ಗುರಿಯನ್ನು ಸಾಧಿಸಲಾಗಿದೆ. ಈ ಗುರಿ ಸಾಧನೆಗೆ ತಾಲೂಕಾ ಆಡಳಿತ, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಪುರಸಭೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಾಲೂಕಿನಲ್ಲಿ ಜನೆವರಿ 16 ರಿಂದ ಇಲ್ಲಿಯವರೆಗೆ ಶೇ.93 ರಷ್ಟು ಪ್ರಗತಿ ಸಾಧಿsssssಸಲಾಗಿದೆ.
ತಾಲೂಕಿನಾದ್ಯಂತ 1,60,815 ಎರಡನೇ ಡೋಸ್ ಲಸಿಕೆಯನ್ನು ಹಾಕಲಾಗಿದೆ. ಈಗಾಗಲೇ ಲಸಿಕೆ ಪಡೆಯದಂತಹ 21,966 ಫಲಾನುಭವಿಗಳ ಪಟ್ಟಿಯನ್ನು ಮಾಡಲಾಗಿದ್ದು, ಅಂತವರುಗಳ ಮನವೊಲಸಿ ಲಸಿಕೆ ನೀಡುವ ಕಾರ್ಯ ತೀವ್ರಗತಿಯಲ್ಲಿ ತಾಲೂಕಿನಾದ್ಯಂತ ಸಾಗಿದೆ.
ಈ ಹಿನ್ನೆಲೆಯಲ್ಲಿ ನ. ದಿ. 22 ರಂದು ಕೋವಿಡ್ ಲಸಿಕೆಯಲ್ಲಿ ಶೇ. 59 ರಷ್ಟು ಸಾಧಿಸಿ ಜಿಲ್ಲೆಯಲ್ಲಿಯೇ ಬೈಲಹೊಂಗಲ ತಾಲೂಕಿನ ಪ್ರಗತಿ ಪ್ರಪ್ರಥಮವಾಗಿದೆ. ಈಗಾಗಲೇ ಲಸಿಕೆ ಪಡೆಯದೇ ಇರುವಂತಹ ಜನರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು ತಾಲೂಕಿನ ಪ್ರತಿ ಮನೆ –ಮನೆಗಳಿಗೆ ತೆರಳಿ ಸೂಕ್ತ ತಿಳುವಳಿಕೆ ನೀಡುವದರ ಜೊತೆಗೆ ಲಸಿಕಾಕರಣ ಮಾಡುತ್ತಿದ್ದಾರೆ.
ಕೋರೋನಾ ಸಾಂಕ್ರಾಮಿಕ ಕಾಯಿಲೆಯಿಂದ ಪ್ರತಿ ನಾಗರಿಕರು ಮುಕ್ತರಾಗಲು ತಾಲೂಕಾ ಆರೋಗ್ಯ ಇಲಾಖೆಯ ಅಧಿಕಾರಿ ಸೇರಿದಂತೆ ಸಿಬ್ಬಂದಿ ಶ್ರಮ ಅವಿರತವಾಗಿರುತ್ತದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ|| ಎಸ್.ಎಸ್.ಸಿದ್ದಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದು ಈ ಲಸಿಕಾ ಸಾಧನೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಆರೋಗ್ಯಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.