ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಿ: ಹಸಬಿ
ಬೈಲಹೊಂಗಲ 02: ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗಣೇಶ ಮೂರ್ತಿಗಳನ್ನು ತಯಾರಿಸಬಾರದು. ಜಲಮೂಲಗಳಲ್ಲಿ ಬಣ್ಣ ಲೇಪಿತ ವಿಗ್ರಹಗಳನ್ನು ವಿಸರ್ಜನೆ ಮಾಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ ಹೇಳಿದರು.
ಅವರು ಪಟ್ಟಣದ ಪುರಸಭೆಯಲ್ಲಿ ಗಣೇಶ ಮೂರ್ತಿ ತಯಾರಕರ, ಮಾರಾಟಗಾರರ ಹಾಗೂ ಗಣೇಶ ಉತ್ಸವ ಮಂಡಳಿ ಸಭೆಯಲ್ಲಿ ಮಾತನಾಡಿ, ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪಿಒಪಿ ಮತ್ತು ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ರಾಜ್ಯ ಜಲಮಂಡಳಿ ನಿಷೇದಿಸಿದೆ. ಪಿಒಪಿ ಗಣೇಶ ವಿಗ್ರಹಗಳು ಕಂಡುಬಂದಲ್ಲಿ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸಿ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಗಣೇಶ ಮೂರ್ತಿಕಾರರ ಸಂಘದ ಅಧ್ಯಕ್ಷ ರಾಜು ಬಡಿಗೇರ, ಕಿರಿಯ ಆರೋಗ್ಯ ನೀರಿಕ್ಷಕ ಸುರೇಶ ಪಾಟೀಲ, ಪಿಎಸ್ಐ ಎಫ.ವೈ.ಮಲ್ಲೂರ, ಎಂ.ಐ.ಕುಟ್ರೆ, ಸೋಮು ಕರವೀರನವರ ಹಾಗೂ ಗಣೇಶ ಉತ್ಸವ ಮಂಡಳಿ ಸದಸ್ಯರು, ಮಾರಾಟಗಾರರು ಇದ್ದರು.