ಧಾರವಾಡ - ಹುಬ್ಬಳ್ಳಿ

ಕನ್ನಡ ಭಾಷೆಯ ಶ್ರೀಮಂತಿಕೆಗೆ ರಂಗಭೂಮಿಯ ಕೊಡುಗೆ ಅಪಾರ: ರಜನಿ ಗರುಡಖೇದ

ಕನ್ನಡ ಭಾಷೆಯ ಶ್ರೀಮಂತಿಕೆಗೆ ರಂಗಭೂಮಿಯ ಕೊಡುಗೆ ಅಪಾರ: ರಜನಿ ಗರುಡಖೇದ

ಲೋಕದರ್ಶನ ವರದಿ 

             ಧಾರವಾಡ 26 : ಕನ್ನಡ ಕಟ್ಟುವಲ್ಲಿ ಹಲವಾರು ಧೀಮಂತರ ಪರಿಶ್ರಮವಿದೆ. ಕನ್ನಡ ಭಾಷೆಯ ಘನತೆಯನ್ನು ಎತ್ತಿ ಹಿಡಿಯುವಲ್ಲಿ ರಂಗಭೂಮಿಯ ನೆಲೆಗಟ್ಟು ಸಹ ಕಾರಣವಾಗಿದೆ. ಇತ್ತಿಚೆಗೆ ಯುವಜನಾಂಗ ರಂಗ ಭೂಮಿಕಡೆಗೆ ಅಷ್ಟಾಗಿ ಒಲವು ತೋರುತ್ತಿಲ್ಲ. ಟಿ.ವಿ. ಮೊಬಾಯಿಲ್ ಇತ್ಯಾದಿಗಳ ಗೀಳಿಗೆ ಬಿದ್ದು ತಮ್ಮತನ ಮರೆಯುತ್ತಿದ್ದಾರೆ ಎಂದು ರಜನಿ ಗರುಡಖೇದ ವ್ಯಕ್ತಪಡಿಸಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು 71 ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ, ನಾಡಹಬ್ಬ-2026 ರ ಅಂಗವಾಗಿ ನವೆಂಬರ್ 18 ರಿಂದ 29 ರವರೆಗೆ 12 ದಿನಗಳ ಕಾಲ ಆಯೋಜಿಸಿರುವ ನಾಟಕೋತ್ಸವದ ಎಂಟನೇ ದಿನ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕನ್ನಡಉತ್ತುವ, ಬಿತ್ತುವ ಕೆಲಸ ಇನ್ನೂ ಗಟ್ಟಿಯಾಗಿ ಮಾಡಬೇಕಾಗಿದೆ. ರಂಗತರಬೇತಿ ಶಿಬಿರ, ನಾಟಕರಚನೆ,   ಇತ್ಯಾದಿ ಯುವಕರನ್ನು ಆಕರ್ಷಿಸುವ ವಿನೂತನರಂಗ ಚಟುವಟಿಕೆಗಳು ಕ.ವಿ.ವ. ಸಂಘದಿಂದಲೇ ಆಗಬೇಕಾಗಿದೆ. ಇದಕ್ಕೆಎಲ್ಲರಂಗ ಸಂಸ್ಥೆಗಳು, ಕಲಾವಿದರು ಸಹಕಾರ ನೀಡಲು ಸಿದ್ದರಿದ್ದೇವೆ ಎಂದರು.   

ಬೆಟಗೇರಿಯ ನಾಗಪ್ಪ ಉಡಕೇರಿ ಅವರಿಗೆ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರುತಾವು ಸಂಗೊಳ್ಳಿ ರಾಯಣ್ಣ ನಾಟಕದಲ್ಲಿ ಅಭಿನಯಿಸಿದ ಪಾತ್ರದ ಸಂಭಾಷಣೆ ತುಣುಕುಗಳನ್ನು ವೇದಿಕೆ ಮೇಲೆ ಪ್ರಸ್ತುತ ಪಡಿಸಿ, ಸನ್ಮಾನಕ್ಕೆ ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. 

ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.ಡಾ. ಶೈಲಜಾಅಮರಶೆಟ್ಟಿ ವಂದಿಸಿದರು.ಭಿನ್ನವತ್ತಳೆ ಫಲಕ ವಾಚನವನ್ನು ಶಿವಾನಂದ ಭಾವಿಕಟ್ಟಿ ಮಾಡಿದರು. 

ರಾಜೇಂದ್ರ ಕಾರಂತರಚನೆಯ, ದಾವಣಗೆರೆಯ ಭೀಮೇಶ್‌ಎಚ್‌.ಎನ್‌. ನಿರ್ದೇಶನದ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕವನ್ನು ಬಳ್ಳಾರಿ ಜಿಲ್ಲೆಯ ಸಿರಿಗೇರಿ ಧಾತ್ರಿರಂಗ ಸಂಸ್ಥೆ ಕಲಾವಿದರು ಮನೋಜ್ಞವಾಗಿ ನಾಟಕ ಪ್ರದರ್ಶನ ನೀಡಿ, ನೆರೆದ ಸಭಿಕರನ್ನು ರಂಜಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಗುರು ಹಿರೇಮಠ, ಡಾ.ಮಲ್ಲಿಕಾಘಂಟಿ, ಡಾ.ಅಶೋಕ ಕೋರಿ, ಸಿ.ಸಿ.ಮಹಾಜನಶೆಟ್ಟರ ಡಾ. ವಿ. ಎಂ.ಶರಭೇಂದ್ರಸ್ವಾಮಿ, ಶಿವ ಕುಲಕರ್ಣಿ ದಂಪತಿಗಳು, ಎಲ್‌.ಆರ್‌. ಬೂದಿಹಾಳ,  ಸದಾಶಿವ ಜನಗೌಡರ, ಆರ್‌.ಡಿ. ಗೆದ್ದೆಣ್ಣವರ, ಶ್ರೀಧರ ಗಸ್ತಿ, ಚಂದ್ರಶೇಖರ ಅಮಿನಗಡ, ಜೋಸೆಪ್ ಮಲ್ಲಾಡಿ, ಬಕ್ಕೇಶಯ್ಯ ಕಂಬಿ, ಎಂ.ಬಿ. ಹೆಗ್ಗೇರಿ, ಶಿವಲಿಂಗಪ್ಪ ಹೂಗರ, ಭೀಮಪ್ಪಜಾಧವ ಸೇರಿದಂತೆ ಅನೇಕರು ಭಾಗವಹಿಸಿದ್ದರು. 


ಸುದ್ದಿ ಓದಿ