ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಇನಾಮ್ದಾರ್ ಚಲನಚಿತ್ರ ತಂಡದಿಂದ ಉರುಳುಸೇವೆ
ಉಗರಗೋಳ 24: ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ‘ಇನಾಮ್ದಾರ್’ ಚಲನಚಿತ್ರ ತಂಡದ 45 ಸದಸ್ಯರು ಭಾನುವಾರ ಉರುಳುಸೇವೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಯಲ್ಲಮ್ಮ ದೇವಿಯಲ್ಲಿ ಪ್ರಾರ್ಥಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಧೇಶಕ ಸಂದೇಶ ಶೆಟ್ಟಿ, ಬೆಳಗಾವಿ ಜಿಲ್ಲೆಯವರಾದ ರಂಜನ್ ಛತ್ರಪತಿ ನಾಟಕ ನಟನಾಗಿ ಮೊದಲ ಬಾರಿ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ. ವಿಭಿನ್ನ ಕಥಾಹಂದರ ಒಳಗೊಂಡ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಷೆಯನ್ನೂ ಆದ್ಯತೆ ಮೇಲೆ ಬಳಸಲಾಗಿದೆ. ಆಡಿಯೊ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 15ರಂದು ಬೆಳಗಾವಿಯಲ್ಲಿ ನಡೆಯಲಿದೆ. ಅಲ್ಲದೆ ಅ. 6ರಂದು ಬೆಂಗಳೂರಿನಲ್ಲಿ ಪಂಚ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇವೆ. ಶೀಘ್ರವೇ ರಾಜ್ಯದಾದ್ಯಂತ ಚಿತ್ರ ತೆರೆಕಾಣಲಿದೆ’ ಎಂದರು.
ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿ ಆಶೀರ್ವಾದ ಪಡೆದು ಈ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಈ ಭಾಗದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಬೇಕು’ ಎಂದರು.ರಂಜನ್ ಛತ್ರಪತಿ, ನಿರ್ಮಾಪಕ ನಿರಂಜನ ಶೆಟ್ಟಿ ತಲ್ಲೂರ ಇತರರಿದ್ದರು.