ಸೌಂದತ್ತಿ

ವೈದ್ಯರು ಹಾಗೂ ಆಶ್ರಮವಾಸಿಗಳ ಕರ್ತವ್ಯ ಒಂದೇ- ಜನರಿಗೆ ಸಾಂತ್ವನ ನೀಡುವುದೇ ನಮ್ಮ ಗುರಿ

ವೈದ್ಯರು ಹಾಗೂ ಆಶ್ರಮವಾಸಿಗಳ ಕರ್ತವ್ಯ ಒಂದೇ- ಜನರಿಗೆ ಸಾಂತ್ವನ ನೀಡುವುದೇ ನಮ್ಮ ಗುರಿ

ಸವದತ್ತಿ 14 : ನಗರದ ಐತಿಹಾಸಿಕ ಗಾಂಧಿ ಚೌಕದಲ್ಲಿ ಮಂಗಳವಾರದಂದು ನವರಾತ್ರಿ ನಾಡಹಬ್ಬದ 3ನೇ ದಿನದ ಅಂಗವಾಗಿ ವೈದ್ಯರ ವೇದಿಕೆ ಹಾಗೂ ಚಿಂತನ ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಜರುಗಿತು.ಜೀವ ಉಳಿಸುವ ಕೈಗಳು, ನೋವಿಗೆ ಸಾಂತ್ವನ ನೀಡುವವರು ಹಾಗೂ ನೊಂದ ಮನಸ್ಸಿಗೆ ಧೈರ್ಯ ತುಂಬುವ ಸಂಜೀವಿನಿಯರಾದ ವೈದ್ಯರು, ಜ್ಞಾನ ಮತ್ತು ಸಹಾನುಭೂತಿಯ ಸಂಗಮ ಎಂದು ಕಾರ್ಯಕ್ರಮದಲ್ಲಿ ಬಣ್ಣಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಾವೇರಿ ಜಿಲ್ಲೆ ಅಗಡಿ ಸುಕ್ಷೇತ್ರ ಆನಂದವನದ ಪ.ಪೂ. ವಿಶ್ವನಾಥ ಚಕ್ರವರ್ತಿಗಳು ಮಾತನಾಡುತ್ತಾ, ಸವದತ್ತಿ ಯಲ್ಲಮ್ಮನ ಈ ಪವಿತ್ರ ಭೂಮಿಯಲ್ಲಿ 46 ವರ್ಷಗಳಿಂದ ದಸರಾ ಮಹೋತ್ಸವ ಅತ್ಯಂತ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಮನುಷ್ಯನ ಆಚರಣೆ ಮತ್ತು ಕರ್ಮ ಶುದ್ಧವಾದರೆ ಎಲ್ಲವೂ ಒಲಿದುಬರುತ್ತದೆ. ನಿಜ ಹೇಳಬೇಕೆಂದರೆ ಆಶ್ರಮವಾಸಿಗಳ ಹಾಗೂ ವೈದ್ಯರ ಸ್ಥಿತಿ ಒಂದೇ ರೀತಿಯಿರುತ್ತದೆ. ಆಶ್ರಮಕ್ಕೆ ಬರುವವರು ಮನಸ್ಸಿನ ನೋವು, ಕಷ್ಟಗಳು ಹಾಗೂ ಸಂಕಷ್ಟಗಳಿಂದ ಬಂದರೆ, ವೈದ್ಯರ ಬಳಿಗೆ ರೋಗಿಗಳು ನೋವಿನಿಂದ ಬರುತ್ತಾರೆ. ಇಬ್ಬರ ಕರ್ತವ್ಯವೂ ಜನರಿಗೆ ಸಾಂತ್ವನ ನೀಡುವುದೇ ಆಗಿದೆ ಎಂದು ಹೇಳಿದರು.ಚಿದಂಬರೇಶ್ವರ ದೇವಸ್ಥಾನ ಗುರ್ಲಹೊಸೂರಿನ ಪ.ಪೂ. ಶ್ರೀ ಪ್ರಸನ್ನ ಬಾಪುಸುಂದರೇಶ ದೀಕ್ಷಿತರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಸಿದ್ಧ ಚುಟುಕು ಸಾಹಿತಿಗಳಾದ ಡಾ. ಅಭಿನಂದನ ಕಬ್ಬಿನ, ಇಂದಿನ ಧಾವಂತದ ಜೀವನಶೈಲಿಯಲ್ಲಿ ಜನರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.ಇಂದಿನ ಯಾಂತ್ರಿಕ ಬದುಕಿನಲ್ಲಿ ಹಣದ ಗಳಿಕೆಯ ಹಿಂದೆ ಓಡುತ್ತಿರುವ ಜನರು ತಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಡೆಗಣಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ದುಷ್ಪರಿಣಾಮಗಳಿಗೆ ದಾರಿ ಮಾಡಿಕೊಡಲಿದೆ. ಆರೋಗ್ಯವೇ ನಿಜವಾದ ಸಂಪತ್ತು ಎಂಬುದನ್ನು ಮರೆತು ಬದುಕಬಾರದು ಎಂದು ಅವರು ಎಚ್ಚರಿಸಿದರು.ನೆರೆದಿದ್ದ ಸಾರ್ವಜನಿಕರೊಂದಿಗೆ ಆರೋಗ್ಯದ ಕುರಿತು ಸಮಾಲೋಚನೆ ನಡೆಸಿದ ಅವರು, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಯೋಗ ಮತ್ತು ಧನಾತ್ಮಕ ಚಿಂತನೆಗಳು ಆರೋಗ್ಯಕರ ಜೀವನದ ಮೂಲಮಂತ್ರಗಳೆಂದು ವಿವರಿಸಿದರು. ಸಾಹಿತ್ಯ ಮತ್ತು ಆರೋಗ್ಯದ ನಡುವಿನ ನಂಟಿನ ಕುರಿತು ಅವರು ಹಂಚಿಕೊಂಡ ವಿಚಾರಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು.ಈ ಸಂದರ್ಭದಲ್ಲಿ ಡಾ. ವಿಜಯ ನಾವದಗಿ, ಡಾ. ಗಜಾನಂದ ಅಂತಕ್ನವರ, ಡಾ. ನಬಿನಾಯಕ ನಾಯಕ, ಡಾ. ಮೌನೇಶ್ ಪೋತದಾರ, ಡಾ. ಮಂಜುನಾಥ ಬಡಿಗೇರ, ಡಾ. ನಿತಿನ್ ಹಣಮಂತಗಡ, ರಿಯಾಜ್ ಮೆಣಸಿನಕಾಯಿ ಹಾಗೂ ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ