ನಶಾಮುಕ್ತ ಕುಟುಂಬ ಮಹಾ ಮ್ಯಾರಥಾನ್ 2026’ ಯಶಸ್ವಿ ಆಯೋಜನೆ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಒತ್ತು
ಸವದತ್ತಿ 04: ಯುವಜನತೆ ಮತ್ತು ಕುಟುಂಬಗಳನ್ನು ಮಾದಕದ್ರವ್ಯ ಮುಕ್ತಗೊಳಿಸಿ, ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಮಹತ್ವದ ಉದ್ದೇಶದಿಂದ ಅಣುವ್ರತ ವಿಶ್ವ ಭಾರತಿ ಸೊಸೈಟಿ ಹಾಗೂ ಶ್ರೀ ಜೈನ್ ಶ್ವೇತಾಂಬರ ತೇರಾಪಂಥ್ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರವ್ಯಾಪಿ ನಶಾಮುಕ್ತ ಕುಟುಂಬ ಮಹಾ ಮ್ಯಾರಥಾನ್ 2026’ ಸವದತ್ತಿಯಲ್ಲಿ ಅತ್ಯಂತ ಉತ್ಸಾಹ ಹಾಗೂ ಸಡಗರದಿಂದ ಜರುಗಿತು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಮ್ಯಾರಥಾನ್ಗೆ ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರು ಹಸಿರು ನಿಶಾನೆ ತೋರುವ ಮೂಲಕ ಅಧಿಕೃತ ಚಾಲನೆ ನೀಡಿದರು.ಚಾಲನೆ ಪಡೆದ ಮ್ಯಾರಥಾನ್ ಎಪಿಎಂಸಿ ಮಾರ್ಗವಾಗಿ ಸಾಗಿ, ಕಡಕೋಳ ಬ್ಯಾಂಕ್ ಸರ್ಕಲ್, ಆನಿ ಅಗಸಿ, ಗಾಂಧಿ ಚೌಕ, ಪೋಸ್ಟ್ ಆಫೀಸ್ ಹಾಗೂ ಲಿಂಗರಾಜ ಸರ್ಕಲ್ ಮೂಲಕ ಸಂಚರಿಸಿ ತೇರಾಪಂಥ್ ಸಭಾಭವನವನ್ನು ತಲುಪಿತು. ಮ್ಯಾರಥಾನ್ನಲ್ಲಿ ನೂರಾರು ಯುವಕರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. . . ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ,ತಾ.ಪಂ. ಇಒ ಆನಂದ ಬಡಕುಂದ್ರಿ, ಬಿಇಒ ಎ.ಎ. ಖಾಜಿ, ಬಸವರಾಜ ಅಯ್ಯನಗೌಡ್ರ, ಶಿವಪ್ರಕಾಶ್ ಪಾಟೀಲ, ಅಮೃತ ಸಾಣಿಕೊಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜೈನ್ ಸಮಾಜದ ಮುಖಂಡರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.