ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕಲಿಕೆಗೆ ವಾಣಿಜ್ಯ ಹಬ್ಬ ಸಹಕಾರಿ
ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕಲಿಕೆಗೆ ವಾಣಿಜ್ಯ ಹಬ್ಬ ಸಹಕಾರಿ
ಸವದತ್ತಿ, ಸೆ. 12: ವಿದ್ಯಾರ್ಥಿಗಳು ಮಾಡಿ ಕಲಿಯುವುದು, ನೋಡಿ ಕಲಿಯುವುದರ ಮೂಲಕ ಉತ್ತಮ ಅನುಭವಜನ್ಯ ಕಲಿಕೆಯನ್ನು ಪಡೆಯಬಹುದು. ಇಂತಹ ಶೈಕ್ಷಣಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಕಲಿಕೆಯನ್ನು ಬೆಳೆಸುವುದರ ಜತೆಗೆ ಭವಿಷ್ಯದ ಬದುಕಿಗೆ ಬಹಳಷ್ಟು ಉಪಯುಕ್ತವಾಗಲಿವೆ ಎಂದು ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿಯ ಹಿರಿಯ ಸದಸ್ಯ ಬಿ.ವಿ. ಮಲಗೌಡರ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ ಪ್ರೇರಿತ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ‘ವಾಣಿಜ್ಯ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ. ವಟ್ಟಣಾಳ ವಹಿಸಿದ್ದರು.
ಕಾರ್ಯಕ್ರಮದ ವಿಶೇಷತೆಯಾಗಿ ವಿದ್ಯಾರ್ಥಿಗಳು ಗಗನಸಖಿ, ನ್ಯಾಯಾಧೀಶ, ವಕೀಲ, ರೈತ, ಲೆಕ್ಕಪರಿಶೋಧಕ, ಬ್ಯಾಂಕ್ ಮ್ಯಾನೇಜರ್, ಪತ್ರಕರ್ತ ಹಾಗೂ ಉಪನ್ಯಾಸಕ ಸೇರಿದಂತೆ ವಿವಿಧ ವೃತ್ತಿಗಳನ್ನು ಆಧರಿಸಿ ಪಾತ್ರಾಭಿನಯ ಮಾಡಿ ಗಮನ ಸೆಳೆದರು.
ಇದಲ್ಲದೆ, ವಿದ್ಯಾರ್ಥಿಗಳು ದಿನಬಳಕೆಯ ವಸ್ತುಗಳ ಉತ್ಪಾದನೆ, ಮಾರಾಟ, ಹಣದ ಚಲಾವಣೆ ಹಾಗೂ ನಗರ ಮತ್ತು ಗ್ರಾಮೀಣ ಪರಿಸರವನ್ನು ಬಿಂಬಿಸುವ ವಿವಿಧ ವಾಣಿಜ್ಯ ಕ್ಷೇತ್ರಗಳ ಮಾದರಿಗಳನ್ನು ರಚಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಪ್ರದರ್ಶನ ವೀಕ್ಷಿಸಲು ಆಗಮಿಸಿದವರಿಗೆ ವಿದ್ಯಾರ್ಥಿಗಳು ಮಾದರಿಗಳ ಕುರಿತು ವಿವರಿಸಿದರು.
ಮಹಾವಿದ್ಯಾಲಯದ ಮೈದಾನದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸ್ವತಃ ತಯಾರಿಸಿದ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಪ್ರಾಯೋಗಿಕ ವ್ಯವಹಾರದ ಅನುಭವವನ್ನು ಪಡೆದುಕೊಂಡರು.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 76 ವಿದ್ಯಾರ್ಥಿಗಳು ಜಾಹೀರಾತು ಪ್ರದರ್ಶನ, ರಸಪ್ರಶ್ನೆ, ಚರ್ಚಾಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಆರ್. ಸವತಿಕರ್, ವಿ.ಎಸ್. ಮೀರಶಿ, ಅನುರಾಧಾ ಹೂಲಿ, ಸ್ವಾತಿ ಬೀಳಗಿ, ಎ.ಎ. ಹಳ್ಳೂರ, ಹರ್ಷಿತಾ ಪಾಟೀಲ, ಮಲ್ಲಮ್ಮ ಮಡಿವಾಳರ, ಜ್ಯೋತಿ ಬಾನಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.