ಹೇಮರೆಡ್ಡಿ ಎನ್ ಅವರ ಚಿತ್ರಕಲಾ ಪ್ರದರ್ಶನದಲ್ಲಿ ಹಿರಿಯ ಕಲಾವಿದ ಶಂಕರ್ಪ ನವಲಬಾ ಅಭಿಮತನಿಸರ್ಗ ಚಿತ್ರಗಳ ರಚನೆಯಲ್ಲಿ ನೆರಳು-ಬೆಳಕಿನ ಸಂಯೋಜನೆ ಬಹಳ ಮುಖ್ಯ
ಕಲಬುರಗಿ: ಜಲವರ್ಣ ಮಾಧ್ಯಮ ಇತರೆ ಕಲಾ ಮಾಧ್ಯಮಕ್ಕಿಂತಲೂ ಭೂದೃಶ್ಯ ಕಲಾಕೃತಿಗಳ ರಚನೆಗೆ ಅತ್ಯುತ್ತಮವಾದ ಮಾಧ್ಯಮವಾಗಿದೆ. ಜೊತೆಗೆ ಬಹು ಕಠಿಣವಾದ ಮಾಧ್ಯಮವೂ ಹೌದು. ನಿಸರ್ಗ ಚಿತ್ರಗಳ ರಚನೆಯಲ್ಲಿ ನೆರಳು-ಬೆಳಕಿನ ಸಂಯೋಜನೆ ಬಹಳ ಮುಖ್ಯ ಎಂದು ಬೆಂಗಳೂರಿನ ಹಿರಿಯ ಚಿತ್ರಕಲಾವಿದ ಶಂಕರ್ಪ ನವಲಬಾ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಅಡಿಯಲ್ಲಿ ನಗರದ ಮಾನಕರ್ ಬಡಾವಣೆಯ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ರಾಯಚೂರಿನ ವಿಶೇಷ ಚೇತನ ಯುವ ಚಿತ್ರಕಲಾವಿದ ಹೇಮರೆಡ್ಡಿ ಎನ್. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಕಲಾವಿದ ಹೇಮರೆಡ್ಡಿ ದೈಹಿಕವಾಗಿ ವಿಶೇಷ ಚೇತನವಾಗಿದ್ದರೂ, ಮಾನಸಿಕವಾಗಿ ಹೆಚ್ಚು ಸದೃಢವಾಗಿ ತನ್ಮಯತೆ ಮತ್ತು ಏಕಾಗ್ರತೆಯಿಂದ ಅತ್ಯುತ್ತಮವಾದ ಹಲವಾರು ನಿಸರ್ಗ ಚಿತ್ರಗಳನ್ನು ರಚಿಸಿ, ಪ್ರದರ್ಶಿಸಿ, ಮಾದರಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಹಿರಿಯ ಚಿತ್ರಕಲಾವಿದ ಕೆ.ಎಸ್. ನಾಗುರೆ ಮುಖ್ಯ ಅತಿಥಿಯಾಗಿ ಮಾತನಾಡಿ ಹೇಮರೆಡ್ಡಿ ಅವರು ಸಣ್ಣ ಗಾತ್ರದಲ್ಲಿ ಸೂಕ್ಷ್ಮವಾದ ಜಲವರ್ಣ ಕಲಾಕೃತಿಗಳನ್ನು ಅತ್ಯಂತ ಕೌಶಲ್ಯಪೂರ್ಣವಾಗಿ ರಚಿಸಿದ್ದು, ಅವರು ಮುಂದಿನ ದಿನಗಳಲ್ಲಿ ದೊಡ್ಡ ಗಾತ್ರದ ಚಿತ್ರಕಲಾಕೃತಿಗಳನ್ನು ವಿವಿಧ ಮಾಧ್ಯಮಗಳಲ್ಲಿ ರಚಿಸಲಿ ಎಂದು ಆಶಿಸಿದರು.
ಹಿರಿಯ ಚಿತ್ರಕಲಾವಿದ ಮತ್ತು ವ್ಹಿ.ಬಿ. ಬಿರಾದಾರ ಕಲಾ ಪ್ರತಿಷ್ಠಾನದ ಅಧ್ಯಕ್ಷ ವ್ಹಿ. ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ಕಲಾವಿದರು ನೈಜ ಚಿತ್ರ ರಚನೆ ಜೊತೆಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಕಲಾಕೃತಿ ರಚಿಸಿಬೇಕೆಂದರು.
ಕಾರ್ಯಕ್ರಮದಲ್ಲಿ ಶೈಲಜಾ ಬಿರಾದಾರ, ನಿರ್ಮಲಾ ನವಲಬಾ, ಸುನಿಲ್ ಚೆಂಗಟಾ, ಬಾಬುರಾವ್ ದಂಗಾಪುರ, ಡಾ. ಪರಶುರಾಮ ಪಿ, ಡಾ. ಕೆ.ಎಂ. ಕುಮಾರಸ್ವಾಮಿ, ಸೇರಿದಂತೆ ಮುಂತಾದವರಿದ್ದರು. ಅತಿಥಿ ಗಣ್ಯರನ್ನು ಸ್ವಾಗತಿಸಿ, ಮಲ್ಲಿಕಾರ್ಜುನ ಆಲೂರು ಕಾರ್ಯಕ್ರಮ ನಿರ್ವಹಿಸಿದರು. ಮಲ್ಲಿಕಾರ್ಜುನ ಕೊರಳ್ಳಿ ವಂದಿಸಿದರು.