ಕನ್ನಡ ನಾಡಿನ ರಾಜ್ಯ ಲಾಂಛನ ಗಂಡಭೇರುಂಡ ಸಂರಕ್ಷಣೆಗೆ ಆಗ್ರಹ
ವಿಜಯಪುರ 25 : ವಿಜಯಪುರ ನಗರದ ಇಂಡಿ ರಸ್ತೆಯ ಪುರಾತನ ಕೋಟೆಯಲ್ಲಿ ಕನ್ನಡ ನಾಡಿನ ರಾಜಮನೆತನ ರಾಷ್ಟ್ರಕೂಟರ ರಾಜ್ಯ ಲಾಂಛನವಾಗಿದ್ದ ಗಂಡಭೇರುಂಡ ಪಕ್ಷಿಯ ಉಬ್ಬು ಶಿಲ್ಪವಿದ್ದು ಇದು ವಿಜಯಪುರ ನಗರದ ಕೋಟೆ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾಗಿರುವ ಬಗ್ಗೆ ಅಧಿಕೃತ ದಾಖಲೆಯಾಗಿದೆ.
ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರು ಲಾಂಛನವಾಗಿ ಬಳಸಿರುವ ಗಂಡ ಬೇರುಂಡದ ಉಬ್ಬು ಶಿಲ್ಪಯಿದ್ದು ರಾಜ್ಯ ಸರಕಾರ ಅಧಿಕೃತ ಲಾಂಛನವಾಗಿ ಬಳಸುತ್ತಿರುವ ಶಿಲ್ಪ ಇರುವ ಪರಿಸರ ಸ್ವಚ್ಛವಾಗಿಡಬೇಕು ಮತ್ತು ಪ್ರವಾಸಿಗರ ವೀಕ್ಷಣೆಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಹಾಗೂ ಕರವೇ ಸ್ವಾಭಿಮಾನಿ ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಜಗದೇವ ಸೂರ್ಯವಂಶಿ, ಮುಖಂಡರಾದ ಪ್ರದೀಪ ಚಲವಾದಿ ವಿಷ್ಣು ಸಾಳುಂಕೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗಂಡಭೇರುಂಡವು ರಾಷ್ಟ್ರಕೂಟರ ಕಾಲದ ತರ್ದವಾಡಿ ನಾಡಿನಲ್ಲಿ ಬರುವ ಇಂದಿನ ವಿಜಯಪುರದ ಕೋಟೆಯಲ್ಲಿ ಕೆತ್ತಿರುವುದು ಕರ್ನಾಟಕದಲ್ಲಿ ಗಂಡಭೇರುಂಡದ ಬಗ್ಗೆ ಸಿಗುವ ಮೊದಲ ಉಬ್ಬು ಶಿಲ್ಪವಾಗಿದೆ. ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಕೋಟೆಯ ಮೇಲೆ ಇರುವ ಐತಿಹಾಸಿಕ ಮಹತ್ವದ ಗಂಡಭೇರುಂಡ ಇರುವ ಕೋಟೆ ಪ್ರದೇಶವನ್ನು ಸಂರಕ್ಷಣೆ ಮಾಡಿ ಮಾಹಿತಿ ಫಲಕ ಅಳವಡಿಸಿ ಪ್ರವಾಸಿಗರು ಮತ್ತು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕು.