ವಿಜಯಪುರ

ಚೆನ್ನಮ್ಮ ಅಪ್ರತಿಮ ಚಿನ್ನಮ್ಮ, ಸ್ಪೂರ್ತಿದಾತೆ ವೀರಮ್ಮ-ಕೋಟ್ಯಾಳ ಅಭಿಮತ

ಚೆನ್ನಮ್ಮ ಅಪ್ರತಿಮ ಚಿನ್ನಮ್ಮ, ಸ್ಪೂರ್ತಿದಾತೆ ವೀರಮ್ಮ-ಕೋಟ್ಯಾಳ ಅಭಿಮತ

 ಆಲಮಟ್ಟಿ 24 : ಅಪ್ರತಿಮ ದಿಟ್ಟತನದ ದೀಪ್ತೆ, ಹೆಮ್ಮೆಯ ಛಲಗಾರ್ತಿ ಕಿತ್ತೂರರಾಣಿ ಚನ್ನಮ್ಮಳ ಯಶೋಗಾಥೆ ವೀರೋಚಿತವಾಗಿದೆ. ಮಹಾನ ವೀರ ವನಿತೆಯ ಶೌರ್ಯ, ತ್ಯಾಗ ಹಾಗೂ ಕೆಚ್ಚೆದೆಯ ಹೋರಾಟ ಅವಿಸ್ಮರಣೀಯವಾಗಿದ್ದು, ಎಂದಿಗೂ ಭಾರತಾಂಬೆಯ ಜನತೆ ಮರೆಯಲಾರರು. ಈ ಅಪ್ರತಿಮೆಯ ಸ್ಪೂರ್ತಿದಾತೆ ನಮಗೆಲ್ಲ ಪ್ರೇರಣಾದಾತೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನುಡಿದರು ಇಲ್ಲಿನ ಆರ್‌.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ 248 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ ಚನ್ನಮ್ಮ.ಅಪ್ರತಿಮ ಹೋರಾಟಗಾರ್ತಿ, ದಿಟ್ಟಗಿತ್ತಿ ಛಾಪುನೊಂದಿಗೆ ವ್ಯಕ್ತಿತ್ವದ ಮೆರುಗು ಪಡೆದಿರುವ ಚೆನ್ನಮ್ಮ ಈ ನೆಲದ ಮಹಾತಾಯಿ ಅಗಿದ್ದಾಳೆ ಎಂದರು.  ಚೆನ್ನಮ್ಮನ ಜೀವನ ಚರಿತ್ರೆ ಮೈನವಿರೇಳಿಸುತ್ತದೆ, ಸಾಧನೆ ಚಿನ್ನದಂಥದ್ದು. ಅವು ಇತಿಹಾಸದ ಪುಟಗಳಲ್ಲಿ ಮೊನಚಾಗಿವೆ. ಸ್ವಾತಂತ್ರ್ಯದ ಕಿಚ್ಚು ಜನಮನದಲ್ಲಿ ಉರಿಸಿ ದಿವ್ಯತೆ ಜ್ಯೋತಿ ಬೆಳಗಿಸಿದ ಈ ವೀರನಾರಿಯ ಪರಾಕ್ರಮ ಬೆರಗು ಮೂಡಿಸುವಂಥದ್ದು. ಹೋರಾಟದ ಮನೋಭಾವ ವಿಭಿನ್ನ ರೂಪತಾಳಿದೆ, ಹೀಗಾಗಿ ಸತ್ಯ ರೂಪಿಣೀಯ ಅಮರತೆ ಇಂದಿಗೂ ಪ್ರಕಾಶಮಯವಾಗಿದೆ ಎಂದರು.ಚೆನ್ನಮ್ಮ ಜನತೆಯ ಮನಕಣದಲ್ಲಿ ವೀರತ್ವದ ಕಾವನ್ನು ಹರಿಬಿಟ್ಟು ಸ್ವಾತಂತ್ರ್ಯ ಪ್ರೇಮ ಅಂಕುರಗೊಳಿಸಿದ್ದಾಳೆ. ಅಂಗ್ಲರ ವಿರುದ್ಧ ಅವಿರತ ಹೋರಾಟ ನಡೆಸಿ ದೇಶಕ್ಕಾಗಿ ಪ್ರಾಣತೆತ್ತಿದ್ದಾಳೆ.  ಚೆನ್ನಮ್ಮನ ಹೆಜ್ಜೆ ಗುರುತು ಮರೆಯಲಾರದ ನೆನಪುಗಳಾಗಿವೆ. ಇಂಥ ಅಪರೂಪ, ಸಾಹಸಮಯ ಮಹಿಳೆಯ ಜೀವನ ಚಿತ್ರಣ ಇಂದಿನ ಯುವ ಮಕ್ಕಳ ಮನಭಾವದಲ್ಲಿ ಬೆಸೆಯಬೇಕು. ಭವಿಷ್ಯತ್ತಿನ ಪೀಳಿಗೆಗೆ ಪರಿಚಯವಾಗಬೇಕು ಎಂದು ಜಿ.ಎಂ.ಕೋಟ್ಯಾಳ ಅಭಿಪ್ರಾಯಿಸಿದರು. ಉಪನ್ಯಾಸಕ ಬಿ.ಬಿ.ಕುಂದರಗಿ, ಟಿ.ಬಿ.ಮೇಟಿ, ವಿಶಾಲ ರಾಠೋಡ, ಅಂಬಿಕಾ ಇಟಗಿ, ಎಲ್‌.ಆರ್‌.ಸಿಂಧೆ, ಕರುಣಿಕ ಆಯ್‌.ಎಸ್‌.ಕುಮಟಗಿ, ಶಿಕ್ಷಕ ಎನ್‌.ಎಸ್‌.ಬಿರಾದಾರ, ಆರ್‌.ಎಂ.ರಾಠೋಡ, ಶ್ರೀಧರ ಚಿಮ್ಮಲಗಿ, ಸಾವಿತ್ರಿ ಸಜ್ಜನ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ ಇತರರಿದ್ದರು .     


ಸುದ್ದಿ ಓದಿ