ವಿಜಯಪುರ

ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

ವಿಜಯಪುರ  24: ವಾಹನ ಸಾಲಗಾರರಿಗೆ ಕಂತಿನ ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಬಾಕಿ ಕಂತುಗಳಿದ್ದರೆ ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ವಾಹನ ಮಾಲೀಕರು ಹಾಗೂ ಚಾಲಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಪ್ರಸ್ತುತ ಬರಗಾಲದ ಪರಿಸ್ಥಿತಿಯಿಂದಾಗಿ ಜನರು ಕುಟುಂಬ ನಿರ್ವಹಣೆ ಮಾಡಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಹಣಕಾಸು ಸಂಸ್ಥೆಗಳು ವಾಹನ ಸಾಲಗಾರರ ಮೇಲೆ ಕಂತಿನ ಹಣ ಪಾವತಿಸುವಂತೆ ಒತ್ತಡ ಹೇರುತ್ತಿವೆ. ಬಾಕಿ ಕಂತುಗಳನ್ನು ಪಾವತಿಸುವುದಾಗಿ ತಿಳಿಸಿದರೂ, ವಾಹನಗಳನ್ನು ಬಲವಂತವಾಗಿ ವಶಕ್ಕೆ ಪಡೆದು, ವಾಹನ ವಶಪಡಿಸಿಕೊಳ್ಳುವ ವೆಚ್ಚವನ್ನೂ ಮಾಲೀಕರ ಮೇಲೆಯೇ ಹೊರಿಸಲಾಗುತ್ತಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಆರೋಪಿಸಿದರು. ಇದರಿಂದ ಅನೇಕ ವಾಹನ ಮಾಲೀಕರು ಹಾಗೂ ಚಾಲಕರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕಾನೂನುಬಾಹಿರವಾಗಿ ವರ್ತಿಸುವ ಹಣಕಾಸು ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಲಾಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ತಾಳಿಕೋಟಿ, ಕೋಲಾರ ತಾಲೂಕು ಅಧ್ಯಕ್ಷ ರವಿಗೊಳಸಂಗಿ, ನಿಡಗುಂದಿ ತಾಲೂಕು ಅಧ್ಯಕ್ಷ ಆನಂದ ಹಡಗಲಿ, ವಿಜಯ ಬಾಗಿ, ಶ್ರೀಧರ, ಆನಂದ ರಾಠೋಡ, ವಿಕ್ಕಿ ರಾಕೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ