ಧಾರವಾಡ - ಹುಬ್ಬಳ್ಳಿ

ಸುಸ್ಥಿರ ಇಂಧನದಿಂದ ಸಮೃದ್ಧ ಭಾರತ-ಪ್ರಾಚಾರ್ಯ ಜೆ ಜಿ ಸೈಯದ

ಸುಸ್ಥಿರ ಇಂಧನದಿಂದ ಸಮೃದ್ಧ ಭಾರತ-ಪ್ರಾಚಾರ್ಯ ಜೆ ಜಿ ಸೈಯದ

ಧಾರವಾಡ 24: ಭಾರತದ ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ, ಕೃಷಿ ಪ್ರಗತಿ ಹಾಗೂ ನಾಗರಿಕರ ಜೀವನಮಟ್ಟದ ಸುಧಾರಣೆಯಲ್ಲಿ ಇಂಧನ ಕ್ಷೇತ್ರವು ಮಹತ್ವದ ಪಾತ್ರ ವಹಿಸುತ್ತದೆ. ವಿಕಸಿತ ಭಾರತ 2047ರ ದೂರದೃಷ್ಟಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಸುರಕ್ಷಿತ, ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ಇಂಧನದಿಂದ ಸಮೃದ್ಧ ಭಾರತ ನಿರ್ಮಾಣವಾಗಲಿದೆ ಎಂದು ಉಪನಿರ್ದೇಶಕರು (ಅ) ಹಾಗೂ ಪ್ರಾಚಾರ್ಯರು ಡಯಟ್ ಜೆ ಜಿ ಸೈಯದ ಹೇಳಿದರು.  ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ  ‘ಭಾರತದ ಇಂಧನದ ವಿವಿಧ ರೀತಿಯ ಮಿಶ್ರಣ 2047: ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಮೇಲಿನ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. 2047ರ ಭಾರತದ ಇಂಧನ ಮಿಶ್ರಣ ಎಂಬ ಪರಿಕಲ್ಪನೆಯು 2047ರ ವೇಳೆಗೆ ಭಾರತದ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು ಬಳಸಲಾಗುವ ವಿವಿಧ ಇಂಧನ ಮೂಲಗಳ ಸಮೂಹವನ್ನು ಸೂಚಿಸುತ್ತದೆ. ಈ ಇಂಧನ ಮಿಶ್ರಣದಲ್ಲಿ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್, ಅಣುಶಕ್ತಿ, ಜೈವಿಕ ಇಂಧನ, ಹಸಿರು ಹೈಡ್ರೋಜನ್, ನೈಸರ್ಗಿಕ ಅನಿಲ ಹಾಗೂ ಇತರ ಇಂಧನ ಮೂಲಗಳು ಪ್ರಮುಖ ಪಾತ್ರ ವಹಿಸಲಿವೆ. ಇದರ ಜೊತೆಗೆ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಮೇಲಿನ ಅವಲಂಬನೆಯನ್ನು ಹಂತ ಹಂತವಾಗಿ ಪರಿವರ್ತಿಸುವ ಪ್ರಯತ್ನಗಳೂ ನಡೆಯಲಿವೆ. ಜಲವಿದ್ಯುತ್ ಮತ್ತು ಅಣುಶಕ್ತಿಯು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಗೆ ಕೊಡುಗೆ ನೀಡಬಲ್ಲವು. ಇಂಧನ ಸಂಗ್ರಹಣಾ ವ್ಯವಸ್ಥೆಗಳು, ಸ್ಮಾರ್ಟ್‌ ವಿದ್ಯುತ್ ಜಾಲಗಳು ಮತ್ತು ಇಂಧನ ದಕ್ಷ ತಂತ್ರಜ್ಞಾನಗಳು ಭಾರತದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸಬಲ್ಲವು ಎಂದರು. .   ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಯಟ್‌ನ ಹಿರಿಯ ಉಪನ್ಯಾಸಕರಾದ ದೀಪಕ ಕುಲರ್ಣಿ ಮಾತನಾಡಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಅಪಾರ ಸಾಮರ್ಥ್ಯವಿದೆ. ವಿಶೇಷವಾಗಿ, ಸೌರಶಕ್ತಿ ಮತ್ತು ಪವನಶಕ್ತಿಯ ಅಭಿವೃದ್ಧಿಗೆ ದೇಶದಲ್ಲಿ ಉತ್ತಮ ಅವಕಾಶಗಳಿವೆ. ಹೇರಳವಾದ ಸೂರ್ಯನ ಬೆಳಕು, ವಿಶಾಲ ಕರಾವಳಿ ಪ್ರದೇಶಗಳು ಮತ್ತು ಅನುಕೂಲಕರ ಭೌಗೋಳಿಕ ಪರಿಸ್ಥಿತಿಗಳು ಶುದ್ಧ ವಿದ್ಯುತ್ ಉತ್ಪಾದನೆಗೆ ನೆರವಾಗುತ್ತವೆ ಎಂದರು.   ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಉಪನ್ಯಾಸಕ ಪುಟ್ಟಪ್ಪ ಭಜಂತ್ರಿ ಮಾತನಾಡಿ, ಅವಕಾಶಗಳು ಸಾಕಷ್ಟಿದ್ದರೂ 2047ರ ಇಂಧನ ಗುರಿಗಳನ್ನು ಸಾಧಿಸುವಲ್ಲಿ ಭಾರತವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಜನಸಂಖ್ಯೆಯ ಹೆಚ್ಚಳ, ನಗರೀಕರಣ ಮತ್ತು ಕೈಗಾರೀಕೀಕರಣದಿಂದ ಇಂಧನದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. 

  ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಕಾನ್ವೆಂಟ್ ಶಾಲೆಯ ಫೌಷ್ಠಿನಾ ಆಚಾರ್ಯ ಪ್ರಥಮ ಸ್ಥಾನ, ಅಣ್ಣಿಗೇರಿಯ ಎನ್ ಎಸ್ ಹುಬ್ಬಳ್ಳಿ ಗರ್ಲ್ಸ ಪ್ರೌಢಶಾಲೆಯ ಭವಾನಿ ಎಸ್ ತಹಶೀಲ್ದಾರ ಹಾಗೂ ಪ್ರಜೆಂಟೇಷನ್ ಶಾಲೆಯ ಜಾನ್ಹವಿ ಎಫ್ ದಿಡ್ಡಿಮಠ ದ್ವಿತೀಯ, ಆದರ್ಶ ವಿದ್ಯಾಲಯ, ಧಾರವಾಡ ಶಾಲೆಯ ಗೋಪಿಚಂದ ಕರೂರ ತೃತೀಯ ಸ್ಥಾನವನ್ನು ಪಡೆದರು. ಕಾರ್ಯಕ್ರಮವನ್ನು ರಾಜು. ಭೂಶೆಟ್ಟಿ ನಿರೂಪಿಸಿದರು. ಶೈಲಾ ನಾಯಕ ಪ್ರಾರ್ಥಿಸಿದರು. ಉಪನ್ಯಾಸಕರಾದ ಗೀತಾ ಚುಳಕಿ, ಹೇಮಲತಾ ಅಮ್ಮಿನಬಾವಿ ನಿರ್ಣಾಯಕರಾಗಿ, ಸುಧಾ ಜಂಬಗಿ ತಾಂತ್ರಿಕ ಸಹಾಯಕರಾಗಿ  ಕಾರ್ಯನಿರ್ವಹಿಸಿದರು. 


ಸುದ್ದಿ ಓದಿ