ಬೆಳಗಾವಿ

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಹಾಗೂ ಕಾರ್ಯಾಗಾರ ಯಶಸ್ವಿ ಸಂಪನ್ನ: ಯುವಜನತೆಯಿಂದಲೇ ಸುಭದ್ರ ರಾಷ್ಟ್ರ ನಿರ್ಮಾಣ

ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಹಾಗೂ ಕಾರ್ಯಾಗಾರ ಯಶಸ್ವಿ ಸಂಪನ್ನ: ಯುವಜನತೆಯಿಂದಲೇ ಸುಭದ್ರ ರಾಷ್ಟ್ರ ನಿರ್ಮಾಣ
NSS Award Presentation and Workshop Successfully Concluded at Kittur Rani Channamma University: Buil

 ಬೆಳಗಾವಿ 24 : ಸಮಾಜಮುಖಿ ಚಿಂತನೆ ಮತ್ತು ನಿಸ್ವಾರ್ಥ ಸೇವೆಯಿಂದ ಮಾತ್ರ ಯುವಜನತೆ ಸುಭದ್ರ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯ ಎಂದು ಭಾರತ ಸರ್ಕಾರದ ಬೆಂಗಳೂರಿನ ಎನ್‌ಎಸ್‌ಎಸ್ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಗಿರಿಧರ್ ಉಪಾಧ್ಯಾಯ ಅವರು ಅಭಿಪ್ರಾಯಪಟ್ಟರು.  ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾಸಂಗಮ ಆವರಣದಲ್ಲಿರುವ ಕುವೆಂಪು ಸಭಾಭವನದಲ್ಲಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆ  ಕೋಶದ ವತಿಯಿಂದ ಆಯೋಜಿಸಲಾಗಿದ್ದ "ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ"ವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಎನ್‌ಎಸ್‌ಎಸ್ ಕೇವಲ ಒಂದು ಯೋಜನೆಯಲ್ಲ, ಅದೊಂದು ಜೀವನಶೈಲಿ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಹಾಗೂ ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಕಾರ್ಯಕ್ರಮ ಅಧಿಕಾರಿಗಳ ಪಾತ್ರ ಹಿರಿದು" ಎಂದು ಅವರು ಶ್ಲಾಘಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, "ರಾಜ್ಯಾದ್ಯಂತ ಎನ್‌ಎಸ್‌ಎಸ್ ಚಟುವಟಿಕೆಗಳು ಅತ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅಧಿಕಾರಿಗಳಿಗೆ ಇಂತಹ ಪುನಶ್ಚೇತನ ಕಾರ್ಯಾಗಾರಗಳು ಹೊಸ ಹುರುಪು ಮತ್ತು ಮಾರ್ಗದರ್ಶನವನ್ನು ನೀಡುತ್ತವೆ. ಪ್ರಶಸ್ತಿಗಳು ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ" ಎಂದರು.  ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಪ್ರೊ. ಬಿ. ಎಸ್‌. ನಾವಿ ಅವರು ಮಾತನಾಡಿದರು.  ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ತೆಲಂಗಾಣದ ನಲಗೊಂಡದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನ್ ಹಾಗೂ ಇಂದಿರಾಗಾಂಧಿ ಎನ್‌ಎಸ್‌ಎಸ್ ಪ್ರಶಸ್ತಿ ಪುರಸ್ಕೃತರಾದ ಪ್ರೊ. ರವಿ ಅಕುಲ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. "ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳಲು ಎನ್‌ಎಸ್‌ಎಸ್ ನನಗೆ ಭದ್ರ ಬುನಾದಿ ಹಾಕಿಕೊಟ್ಟಿತು. ವಿದ್ಯಾರ್ಥಿಗಳನ್ನು ಸಮಾಜದ ನೈಜ ಸಮಸ್ಯೆಗಳಿಗೆ ಸ್ಪಂದಿಸುವಂತೆ ಪ್ರೇರೇಪಿಸುವುದೇ ನಮ್ಮ ಮೊದಲ ಕರ್ತವ್ಯವಾಗಬೇಕು" ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಮಾತನಾಡಿ, "ನಮ್ಮ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕಗಳು ಗ್ರಾಮೀಣಾಭಿವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿವೆ. ಇಂದು ರಾಣಿ ಚನ್ನಮ್ಮ ಪ್ರಶಸ್ತಿ ಸ್ವೀಕರಿಸಿದ ಪ್ರತಿಯೊಬ್ಬರೂ ಇತರರಿಗೆ ಮಾದರಿಯಾಗಿ, ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು" ಎಂದು ಹಾರೈಸಿದರು. ಇದೇ ವೇಳೆ ಸಾಧಕ ಎನ್‌ಎಸ್‌ಎಸ್ ಅಧಿಕಾರಿಗಳು ಮತ್ತು ಸ್ವಯಂಸೇವಕರಿಗೆ 'ರಾಣಿ ಚನ್ನಮ್ಮ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು.  ಎನ್‌ಎಸ್‌ಎಸ್ ಕೋಶದ ಕಾರ್ಯಕ್ರಮ ಸಂಯೋಜಕರಾದ ಡಾ. ಕನಕಪ್ಪ ಪೂಜಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಬೆಳಗಾವಿ ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿ ಪ್ರಕಾಶ ಕುರುಪಿ ನಿರೂಪಿಸಿದರು. ವಿಜಯಪೂರ ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿ ಗಂಗಾಧರ ಅಗಸರ ವಂದಿಸಿದರು. 


ಸುದ್ದಿ ಓದಿ