ಬೆಳಗಾವಿ

ಇನಾಂಹೊಂಗಲ ಬ್ರಿಜ್ ಬಳಿ ತಗ್ಗು-ಗುಂಡಿ ಬಿದ್ದಿದ್ದ ರಸ್ತೆ ದುರಸ್ತಿ, ಪ್ರಯಾಣಿಕರ ನಿರಾಳ

ಇನಾಂಹೊಂಗಲ ಬ್ರಿಜ್ ಬಳಿ ತಗ್ಗು-ಗುಂಡಿ ಬಿದ್ದಿದ್ದ ರಸ್ತೆ ದುರಸ್ತಿ, ಪ್ರಯಾಣಿಕರ ನಿರಾಳ


          ಸವದತ್ತಿ : ತಾಲೂಕಿನ ಇನಾಂಹೊಂಗಲ ಗ್ರಾಮದ ಬಳಿಯ ಸೇತುವೆ (ಬ್ರಿಜ್) ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಬೃಹತ್ ತಗ್ಗು-ಗುಂಡಿಗಳನ್ನು ಕೊನೆಗೂ ಮುಚ್ಚಿ ದುರಸ್ತಿ ಕೈಗೊಳ್ಳಲಾಗಿದ್ದು, ನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

             ಸವದತ್ತಿ-ಧಾರವಾಡ ಮಾರ್ಗವು ಈ ಭಾಗದ ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಪ್ರತಿದಿನ ನೂರಾರು ಲಘು ಹಾಗೂ ಭಾರಿ ವಾಹನಗಳು, ಕೆಎಸ್‌ಆರ್ಟಿಸಿ ಬಸ್ಸುಗಳು ಮತ್ತು ದ್ವಿಚಕ್ರ ವಾಹನ ಸವಾರರು ಈ ಮಾರ್ಗವಾಗಿ ಸಂಚರಿಸುತ್ತಾರೆ. ಸಾಲು ಸಾಲು ಹಬ್ಬಗಳು ಹಾಗೂ ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ಪ್ರಸಿದ್ಧ ಶ್ರೀ ಕ್ಷೇತ್ರ ಯಲ್ಲಮ್ಮದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತಾದಿಗಳು ಇದೇ ರಸ್ತೆಯ ಮೂಲಕ ಸಾಗುತ್ತಿದ್ದರು.

         ಆದರೆ, ಇನಾಂಹೊಂಗಲ ಬ್ರಿಜ್ ಬಳಿ ರಸ್ತೆ ಸಂಪೂರ್ಣ ಹದಗೆಟ್ಟು ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದರಿಂದ ವಾಹನ ಸವಾರರು ಪ್ರತಿದಿನ ಪ್ರಾಣಭಯದಲ್ಲೇ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿತ್ತು.ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಪಡಿಸಬೇಕೆಂದು ಇನಾಂಹೊಂಗಲ ಗ್ರಾಮಸ್ಥರು ಮತ್ತು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದರು. 

            ಸಾರ್ವಜನಿಕರ ಹಾಗೂ ಭಕ್ತರ ಹಿತದೃಷ್ಟಿಯಿಂದ ಈ ರಸ್ತೆಯ ದುರವಸ್ಥೆಯ ಕುರಿತು ಲೋಕ ದರ್ಶನ ಪತ್ರಿಕೆಯಲ್ಲಿ ಅಕ್ಟೋಬರ್ 14 ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ಪತ್ರಿಕಾ ವರದಿಗೆ ತಕ್ಷಣವೇ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಲ್ಲದೆ,

       ಹದಗೆಟ್ಟಿದ್ದ ಬ್ರಿಜ್ ಬಳಿಯ ದೊಡ್ಡ ತಗ್ಗು-ಗುಂಡಿಗಳನ್ನು ಮುಚ್ಚಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗಿ ವರದಿ ಪ್ರಕಟಿಸಿದ ‘ಲೋಕ ದರ್ಶನ’ ಪತ್ರಿಕೆಗೆ ಹಾಗೂ ತಕ್ಷಣವೇ ಕಾರ್ಯಪ್ರವೃತ್ತರಾಗಿ ರಸ್ತೆ ದುರಸ್ತಿಗೊಳಿಸಿದ ಇಲಾಖೆಯ ಅಧಿಕಾರಿಗಳಿಗೆ ಇನಾಂಹೊಂಗಲ ಗ್ರಾಮಸ್ಥರು, ಶ್ರೀ ಯಲ್ಲಮ್ಮದೇವಿಯ ಭಕ್ತಾದಿಗಳು ಮತ್ತು ಪ್ರಯಾಣಿಕರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. 


ಸುದ್ದಿ ಓದಿ