ಲಿಂಗರಾಜ ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ
ಬೆಳಗಾವಿ 25: ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ (ಸ್ವಾಯತ್ತ) ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕವು 2025-26ನೇ ಸಾಲಿನ ಅತ್ಯುತ್ತಮ ಎನ್ಎಸ್ಎಸ್ ಘಟಕ ಪ್ರಶಸ್ತಿಗೆ ಭಾಜನವಾಗಿದೆ. ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಬೆಳಗಾವಿಯಲ್ಲಿ ನಡೆದ ಎನ್ಎಸ್ಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಬೆಂಗಳೂರಿನ ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಗಿರಿಧರ ಉಪಾಧ್ಯಾಯ ಉದ್ಘಾಟಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್ಎಸ್ಎಸ್ ಘಟಕದ ರಾಜ್ಯ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತೆಲಂಗಾಣದ ನಲ್ಗೊಂಡದಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಡೀನ್ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರೊ. ರವಿ ಅಕುಲಾ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ (ಕೆಎಎಸ್), ಪ್ರೊ. ಡಿ. ಎನ್. ಪಾಟೀಲ ಹಾಗೂ ಪ್ರೊ. ಬಿ. ಎಸ್. ನಾವಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.