ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮೇಲೆ ಕ್ರಮಕ್ಕೆ ಒತ್ತಾಯ
ಉಪವಿಭಾಗಾಧಿಕಾರಿ ಕಚೇರಿ ಎದುರು ದಲಿತ ಸಮಾಜ ಬಾಂಧವರ ಪ್ರತಿಭಟನೆ
ಬೈಲಹೊಂಗಲ 06: ಪಟ್ಟಣದ ಪುರಸಭೆ ವಾರ್ಡ್ ನಂ.24ರ ಇಂದಿರಾ ನಗರದ ಗಂಗೆ, ಗೌರಿ ಮಡ್ಡಿಯಲ್ಲಿರುವ ದಲಿತ ಬಾಂಧವರನ್ನು ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಿ ಅಂಬೇಡ್ಕರ ಯುವ ಸೇನೆ ವತಿಯಿಂದ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಸೇರಿದ ದಲೀತ, ಕೊರವ ಸಮಾಜ ಬಾಂಧವರು ಗಂಗೆ, ಗೌರಿ ನಗರದಲ್ಲಿ ಗುಡಿಸಲು, ಷಡ್ಡಗಳನ್ನು ಹಾಕಿಕೊಂಡು ಸುಮಾರು 30 ವರ್ಷಗಳಿಂದ ಕುಟುಂಬ ಸಮೇತ ವಾಸಿಸುತ್ತಿದ್ದೇವೆ. ಮುಖ್ಯಾಧಿಕಾರಿ ಸ್ಥಳಕ್ಕೆ ಬಂದು ಕಂಪೌಂಡ್ ಕೆಡವಿ ದಬ್ಬಾಳಿಕೆ ಮಾಡಿದ್ದಾರೆ ಎಂದು ದೂರಿದರು.
ನಿವಾಸಿ ರಮೇಶ ಕೋಟಿ ಮಾತನಾಡಿ, 'ಪುರಸಭೆಯಿಂದ ನೀಡಿದ ಜಾಗದಲ್ಲಿ ಕಳೆದ 30 ವರ್ಷಗಳಿಂದ ಗುಡಿಸಲು, ಷಡ್ಡು ಹಾಕಿ ವಾಸಿಸುತ್ತಿದ್ದೇವೆ. ನಮ್ಮ ಜಾಗೆಯಲ್ಲಿ ಕಂಪೌಂಡ್ ಕಟ್ಟಿಕೊಂಡಿದ್ದೇವೆ. ಮುಖ್ಯಾಧಿಕಾರಿಗಳು ಯಾವುದೇ ನೋಟೀಸು ನೀಡದೆ ಕಂಪೌಂಡ್ ತೆರುವುಗೊಳಿಸಿ, ಬಾಯಿಗೆ ಬಂದ ಹಾಗೆ ಬೈದು ದೌರ್ಜನ್ಯ ಎಸಗಿದ್ದಾರೆ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ನಮಗೆ ನ್ಯಾಯ ಒದಗಿಸಿಕೊಡಬೇಕು. ಕಂಪೌಂಡ್ ಕೆಡವದಂತೆ ಕೈ, ಕಾಲು ಬಿದ್ದರೂ ಸ್ಪಂದಿಸಲಿಲ್ಲ. ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇವೆ ಎಂದು ಕಿವಿಗೊಡಲಿಲ್ಲ. ಒಂದಿಷ್ಟು ಮಾನವೀಯತೆ ತೋರಲಿಲ್ಲ' ಎಂದು ಗಂಭೀರ ಆರೋಪ ಮಾಡಿದರು.
ಮುಖಂಡರಾದ ಪರುಶರಾಮ ರಾಯಭಾಗ, ಮಾರುತಿ ಕುಂಡೂರ ಮಾತನಾಡಿ, 'ಮನವಿಗೆ ಸ್ಪಂದಿಸದಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ' ಎಚ್ಚರಿಸಿದರು. ರಾಮು ಕಳಂಕರ, ಮಂಜುನಾಥ ಕಡೆಮನಿ, ಗಣೇಶ ಕ್ವಾಟೆ, ರವಿ ಕೋಟಿ, ಸುಂಕಪ್ಪ ಕೋಟಿ, ದ್ಯಾಮಪ್ಪ ಕಡೆಮನಿ, ಗಂಗಾಧರ ಧಾರವಾಡ, ಈಶ್ವರ ಕೋಟಿ, ಅನೇಕರು ಇದ್ದರು.
ಅನಧಿಕೃತವಾಗಿ ಕಂಪೌಂಡ್ ನಿರ್ಮಿಸಲಾಗಿತ್ತು. ಈ ಕುರಿತು ದೂರು ಬಂದಿತ್ತು. ಅದಕ್ಕಾಗಿ ಕಂಪೌಂಡ್ ತೆರುವುಗೊಳಿಸಲಾಗಿದೆ.
ವೀರೇಶ ಹಸಬಿ, ಮುಖ್ಯಾಧಿಕಾರಿ