ಅಥಣಿ

ಇಂದು ಶೇಗುಣಸಿಯ ವಿರಕ್ತಮಠದ ಜಾತ್ರಾ ಮಹೋತ್ಸವ

ಇಂದು ಶೇಗುಣಸಿಯ ವಿರಕ್ತಮಠದ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಹಾರೂಗೇರಿ 19: ಅಥಣಿ ತಾಲೂಕಿನ ಪವಿತ್ರ ಕೃಷ್ಣಾನದಿ ತಟಾಕದಲ್ಲಿರುವ ಸುಕ್ಷೇತ್ರ ಶೇಗುಣಸಿಯ ವಿರಕ್ತಮಠವು ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಬಳಿವಿಡಿದು ಬಂದ ಅಪಾರ ಭಕ್ತ ಸಂಕುಲದ ಶ್ರದ್ಧಾ ಕೇಂದ್ರವಾಗಿದೆ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುತ್ತ ಶ್ರೀಮಠವು ಸಮಾಜಪರ ಕಾಯಕ ಕೈಂಕರ್ಯಗಳನ್ನು ಕಾಲದಿಂದ ಕಾಲಕ್ಕೆ ಪೂರೈಸುತ್ತ ಬಂದಿರುವುದು ಒಂದು ಚಾರಿತ್ರಿಕ ದಾಖಲೆಯಾಗಿದೆ. ಶ್ರೀಮಠದ 10ನೆಯ ಪೀಠಾಧಿಪತಿಗಳಾಗಿದ್ದ ಲಿಂ. ಮುರುಘೇಂದ್ರ ಮಹಾಸ್ವಾಮಿಗಳು ತ್ರಿಕಾಲ ಜ್ಞಾನಿಗಳಾಗಿದ್ದರು. ಭಕ್ತ ಪ್ರೇಮಿಗಳಾಗಿದ್ದವರು. ವಾಕ್ಸಿದ್ಧಿ ಪುರುಷರಾದ ಪೂಜ್ಯರು ನಂಬಿ ಬಂದ ಭಕ್ತರ ನೋವು ನಿವಾರಿಸಿ ನಿರಂಜನ ಯೋಗಿಗಳಾಗಿದ್ದರು.  

ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ನಿರಂತರವಾಗಿ ಸಂಚರಿಸಿ, ಧಾಮರ್ಿಕ ಆಚರಣೆಗಳ ಕುರಿತಾಗಿ ಜನಜಾಗೃತಿಯನ್ನುಂಟುಮಾಡಿದವರು. ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಅಪಾರ ಭಕ್ತಬಂಧುಗಳು ಪೂಜ್ಯರ ದರ್ಶನಾಶೀವರ್ಾದ ಪಡೆದು ಪೂಜ್ಯರ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನು ಹಸನುಮಾಡಿಕೊಳ್ಳುತ್ತಿದ್ದರು. ನಾಗನೂರು ರುದ್ರಾಕ್ಷಿಮಠದ ಮಹಾಪ್ರಸಾದಿ ಶಿವಬಸವ ಮಹಾಸ್ವಾಮಿಗಳವರು ಸಂಸ್ಥಾಪಿಸಿದ ಕುಮಾರೇಶ್ವರ ಉಚಿತ ಪ್ರಸಾದ ನಿಲಯದ ಬೆಳವಣಿಗೆಗೆ ಸಹಾಯ-ಸಹಕಾರ ನೀಡಿದವರು. ಸನ್ಮಾನ ಮತ್ತು ಕಾಣಿಕೆಗಳನ್ನು ನಯವಾಗಿಯೇ ನಿರಾಕರಿಸುತ್ತಿದ್ದ ಪೂಜ್ಯರು, ಆಯಾ ಗ್ರಾಮದ ಬಡಮಕ್ಕಳಿಗಾಗಿ ಆ ಕಾಣಿಕೆಯನ್ನು ವಿನಿಯೋಗಿಸುವಂತೆ ಆದೇಶಿಸುತ್ತಿದ್ದರು. ಅಂತೆಯೇ ಪೂಜ್ಯರು ಅಪಾರ ಭಕ್ತರ ಪಾಲಿನ ಆರಾಧ್ಯ ಗುರುಗಳಾಗಿದ್ದರು. 

ತಮ್ಮ ನಿರಾಭಾರಿ ವ್ಯಕ್ತಿತ್ವದಿಂದಾಗಿ ಅಪಾರ ಜನಮನ್ನಣೆ ಗಳಿಸಿದ ಪೂಜ್ಯರು ಶೇಗುಣಸಿ ಶ್ರೀಮಠದ ಸೇವಾಕ್ಷಿತಿಜವನ್ನು ವಿಸ್ತಾರೋನ್ನತವಾಗಿ ಬೆಳೆಸಿದವರು. ಪೂಜ್ಯರ ಸಮರ್ಥ ವಾರಸುದಾರರಾದ ಶಂಕರ ಮಹಾಸ್ವಾಮಿಗಳು ಇಷ್ಟಲಿಂಗ ಪೂಜಾನಿಷ್ಠರು. ಶಿಕ್ಷಣ ಪ್ರೇಮಿಗಳಾದ ಶ್ರೀಗಳು ಗ್ರಾಮೀಣ ಭಾಗದ ಬಡಮಕ್ಕಳ ಕಲ್ಯಾಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದವರು. ಬೆಳಗಾವಿ ನಗರದಲ್ಲಿಯೂ ಶ್ರೀಮಠ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪಿಸಿದವರು. 

ಪೂಜ್ಯರ ಮಾರ್ಗದರ್ಶನದಂತೆ ಶ್ರೀಮಠದ ಜಾತ್ರಾ ಮಹೋತ್ಸವವು ಜರುಗುತ್ತಿದೆ. ದಿ. 20ರಂದು ಗುರುವಾರ ಮುಂಜಾನೆ 7 ಗಂಟೆಗೆ ಇಷ್ಡಲಿಂಗ ದೀಕ್ಷಾ ಮತ್ತು ರುದ್ರಾಕ್ಷಿಧಾರಣೆ ಸಮಾರಂಭ ಮತ್ತು ಸಕಲ ವಾದ್ಯವೈಭವಗಳೊಂದಿಗೆ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಮತ್ತು ಸಂಜೆ 7 ಗಂಟೆಗೆ ಶಿವಾನುಭವ ಚಿಂತನಗೋಷ್ಠಿ ನಡೆಯಲಿದೆ. ಗದುಗಿನ ಜಗದ್ಗುರುಗಳು ದಿವ್ಯಸಾನಿಧ್ಯ ವಹಿಸಲಿದ್ದು, ನಾಗನೂರು,  ಹಂದಿಗುಂದ, ಹಲ್ಯಾಳ ಶ್ರೀಗಳ ನೇತೃತ್ವದಲ್ಲಿ, ಶ್ರೀಮಠದ ಉತ್ತರಾಧಿಕಾರಿ ಡಾ. ಮಹಾಂತ ಸ್ವಾಮಿಗಳವರ ಸಮ್ಮುಖದಲ್ಲಿ ನೆರವೇರುವುದು. 

15 ದಿನಗಳ ಪರ್ಯಂತರವಾಗಿ ಜರುಗಿದ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮವು ಮಂಗಲಗೊಳ್ಳುವುದು. ನಂತರ ಮಹಾಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಶ್ರೀಮಠದ ಪ್ರಕಟನೆಯು ತಿಳಿಸಿದೆ 

ಸುದ್ದಿ ಓದಿ