ರೈತರ ಬದುಕಿನ ಸ್ಥಿತಿಗತಿ ಕುರಿತು ಇಂದಿನ ಮಕ್ಕಳಿಗೆ ಅರಿವು ಮೂಡಿಸುವುದು ಅಗತ್ಯ: ಬಂಡೆ
ಇಂಡಿ 23: ರೈತರು ಸಮಾಜಕ್ಕೆ ನೀಡುವ ಕೊಡುಗೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ, ರೈತರು ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಬೆಳೆ ಬೆಳೆಯುವ ರೀತಿ,ಅವರ ಬದುಕಿನ ಸ್ಥಿತಿಗತಿ, ಅವರ ಜೀವನ ನಿರ್ವಹಣೆಯ ರೀತಿಯ ಕುರಿತು ಇಂದಿನ ಮಕ್ಕಳಿಗೆ ಅರಿವು ಮೂಡಿಸುವದು ಅತ್ಯವಶ್ಯವಾಗಿದೆ ಎಂದು ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ರೈತರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದೆ, ಕೃಷಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಪೂರೈಸಿಕೊಂಡು,ರೈತರು ಆ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿ ಎಸ್ ಬಿ ಹೆಬ್ಬಾಳ ಮಾತನಾಡುತ್ತಾ ದೇಶದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿ.23ರಂದು ಪ್ರತಿ ವರ್ಷ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಚರಣ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದಿದ್ದರು. ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಂಡಿ ಪಟ್ಟಣದ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಪ್ರತೀಕ ಪಾಟೀಲ, ಡಾ.ಆಯ್ ಎಂ ಪಟೇದ, ಫಾರ್ಮಸಿಸ್ಟ ಎಂಪಿ ಗಾಣಿಗೇರ ಅವರು ಮಕ್ಕಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಆರೋಗ್ಯದ ಕುರಿತು ಸಲಹೆಗಳನ್ನು ನೀಡಿದರು. ಶಿಕ್ಷಕಿ ಎಸ್ ಎಚ್ ಮೈದರಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.