ಹಾಲಸ್ವಾಮಿಗಳ ಮುಳ್ಳು ಗದ್ದುಗೆ ಉತ್ಸವ
ಲೋಕದರ್ಶನ ವರದಿ
ಹೂವಿನಹಡಗಲಿ ಅ.29 : ತಾಲೂಕಿನ ಹಿರೇಹಡಗಲಿಯಲ್ಲಿ ಸದ್ಗುರು ಶ್ರೀ ಹಾಲಸ್ವಾಮೀಜಿಗಳ ಮುಳ್ಳುಗದ್ದುಗೆ ಉತ್ಸವ ಬುಧವಾರ ರಾತ್ರಿ ವಿಜೃಂಣೆಯಿಂದ ನಡೆಯಿತು.ಶ್ರೀ ಸ್ವಾಮಿಯ ಸೇವಾರ್ಥಿಗಳು ಹಾಗೂ ಬಾಬುದಾರರು ಬೆಳಗ್ಗೆ ಶ್ರದ್ಧಾಭಕ್ತಿಯಿಂದ ಮೆರವಣಿಗೆ ಮೂಲಕ ಮುಳ್ಳನ್ನು ತಂದು ಗದ್ದುಗೆಯಲ್ಲಿ ಹಾಸಿ ಅಲಂಕರಿಸಲಾಗಿತ್ತು.
ರಾತ್ರಿ ಶ್ರೀಮಠದ ಹಾಲಸ್ವಾಮೀಜಿಯವರು 11ದಿನಗಳ ಉಪವಾಸ ವ್ರತದ ಬಳಿಕ ಸಂಪ್ರದಾಯ ಮತ್ತು ಪರಂಪರೆಯಂತೆ ಧಾರ್ಮಿಕ ಪೂಜೆ, ಪುನಸ್ಕಾರಗಳನ್ನು ಪೂರ್ಣಗೊಳಿಸಿ ಅಗ್ನಿಕುಂಡ ಪ್ರವೇಶಿಸಿದ ನಂತರ ಮುಳ್ಳುಗದ್ದುಗೆಯನ್ನು ಏರಿದರು. ಇದಕ್ಕೂ ಮೊದಲು ಶ್ರೀಮಠದಸೇವಾ ಪರಂಪರೆ ಮುಂದುವರಿಸಿಕೊಂಡು ಬಂದಿರುವ ತೇಜಮ್ಮ(ಕುದುರೆ) ಪಕ್ಕದ ಮಾನಿಹಳ್ಳಿಯಲ್ಲಿ ಬನ್ನಿ ಮಹಾಂಕಾಳಿ ಪೂಜೆ ನೆರವೇರಿಸಿಕೊಂಡು ಬಂದು ಸ್ವಾಮೀಜಿಯವರ ಸಂಗಡವೇ ಅಗ್ನಿಕುಂಡವನ್ನು ಪ್ರವೇಶಿಸಿತು.
ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಹರ್ಷೋದ್ಗಾರಗಳು ಮುಗಿಲು ಮುಟ್ಟಿ ಭಕ್ತಿಯ ಪರಾಕಾಷ್ಠೆ ಮೆರೆದರು.ದಲಿತ ಮಹಿಳೆಯರು ಐದಾರು ನೂರು ವರ್ಷಗಳ ಶ್ರೀಮಠದ ಇತಿಹಾಸ, ಪವಾಡಗಳನ್ನು ತಮ್ಮದೇ ಆದ ಜನಪದ ಶೈಲಿಯ ಹಾಡುಗಳ ರೂಪದಲ್ಲಿ ವರ್ಣಿಸುತ್ತ ಮೆರವಣಿಗೆ ಮೂಲಕ ಸಾಗಿ ಗಮನ ಸೆಳೆದರು. ಉತ್ಸವದಲ್ಲಿ ಮಠದ ಸದ್ಗುರು ಹಾಲವೀರಭದ್ರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ, ಅಭಿನವ ಹಾಲವೀರ್ಪಜ್ಜ ಸ್ವಾಮೀಜಿ ನೇತೃತ್ವ ವಹಿಸಿದ್ದರು.