ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ: ಆರೋಪ
ಲೋಕದರ್ಶನ ವರದಿ
ಅಥಣಿ 23: ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಆದರೂ ಕೂಡ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಾಗಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಶಂಕುಸ್ಥಾಪನೆ ನೆರವೇರಿಸುವ ಸಂಚು ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಅಧಿಕೃತ್ ಅಭ್ಯರ್ಥಿ ಸಂಪತ್ತಕುಮಾರ ಶೆಟ್ಟಿ ಆರೋಪಿಸಿದರು.
ಅವರು ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿದ್ದರು. ನಾನು ಇತ್ತೀಚಿಗೆ ಸಂಬಂಧ ಪಟ್ಟ ಇಲಾಖೆಯಲ್ಲಿ ವಿಚಾರಿಸಿದಾಗ ಇನ್ನು ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದು ಇಷ್ಟಾಗಿಯೂ ಒಂದು ವೇಳೆ ಮುಖ್ಯಮಂತ್ರಿಗಳಿಂದ ಶಂಕು ಸ್ಥಾಪನೆಗೆ ಮುಂದಾದಲ್ಲಿ ನಮ್ಮ ಪಕ್ಷದಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪಂಜಾಬ ಹಾಗೂ ದೆಹಲಿಆಮ್ ಆದ್ಮಿ ಸರಕಾರಗಳು ಶೈಕ್ಷಣಿಕ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಕರ್ನಾಟಕದಲ್ಲಿಯೂ ಸಹ ಅನುಷ್ಠಾನಗೊಳಸಲಾಗುವುದು ಎಂದರು.
ಅಥಣಿ ಪುರಸಭೆ ಪ್ರಾರಂಭಗೊಂಡು 150 ವರ್ಷಗಳ ಇತಿಹಾಸಹೊಂದಿದೆ ಆದರೆ ಇಲ್ಲಿಯವರೆಗೂ ನಗರ ಸಭೆಯಾಗಿ ಬಡ್ತಿ ಕೂಡ ಹೊಂದಿಲ್ಲ ಇದಕ್ಕೆ ಪ್ರಮುಖ ಕಾರಣ ಇಲ್ಲಿಯ ಜನಪ್ರತಿನಿಧಿಗಳ ನಿರ್ಲಕ್ಷ ಹಾಗೂ ಇಚ್ಛಾಶಕ್ತಿಯ ಕೊರೆತೆ ಎಂದ ಅವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಅಥಣಿ ಪುರಸಭೆಯನ್ನು ನಗರ ಸಭೆಯಾಗಿ ಬಡ್ತಿ ಮಾಡುತ್ತೇವೆ ಎಂದ ಅವರು ಭ್ರಷ್ಟಾಚಾರ, ದುರಾಡಳಿತ ಮುಕ್ತ ಆಡಳಿತ ಮಾಡುತ್ತೇವೆ ಎಂದರು.
ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆ ಕರ್ನಾಟಕದಲ್ಲಿ ಸಿಗುತ್ತಿಲ್ಲ ಆದರೆ ನಮ್ಮ ಪಕ್ಷ ಅಧಿಕಾರದಲ್ಲಿರುವ ಪಂಜಾಬ ರಾಜ್ಯದಲ್ಲಿ ಕರ್ನಾಟಕಕ್ಕಿಂತ ಕಡಿಮೆ ಇಳುವರಿ ಕಬ್ಬು ಇದ್ದರೂ ಕೂಡ ಕರ್ನಾಟಕಕ್ಕಿಂತ ಹೆಚ್ಚು ದರ ಕಬ್ಬಿಗೆ ನಡಲಾಗುತ್ತಿದ್ದು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯೂ ಸಹ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುತ್ತೇವೆ ಎಂದರು.
ಸರಕಾರಿ ಶಾಲೆಗಳ ಸ್ಥಿತಿ ತೀರ ಹದಗೆಟ್ಟು ಹೋಗಿದ್ದು, ಸರಕಾರಿ ಶಾಲೆಗಳನ್ನು ಅಭಿವೃಧ್ಧಿ ಪಡಿಸಿದಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆ ಆಗಬಹುದು ಎನ್ನುವ ಕಾರಣದಿಂದ ಸ್ಥಳೀಯ ಜನಪ್ರತಿನಿಧಿಗಳು ಸರಕಾರಿ ಶಾಲೆಗಳನ್ನು ಸುಧಾರಿಸುತ್ತಿಲ್ಲ್ಲ ಎಂದ ಅವರು ಸ್ಥಳೀಯ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಈ ಬಗೆಗೆ ಮಾಹಿತಿ ಸಂಗ್ರಹಿಸಿ ಬಹಿರಂಗ ಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಿನಾಯಕ ದೇಸಾಯಿ, ಶಿವರಾಜ ಬೋರಾಡೆ, ಗುರ್ಪ ಮಗದುಮ್, ಸುಭಾಷ ಬಾಮನೆ, ಸಿದು ಮ್ಯಾಗೇರಿ, ಅಫಾನ್ ಮಾಸ್ಟರ್, ಶಕಿಳ್ ಶೇಖ, ಅಬ್ದುಲ್ ರೆಹಮಾನ್ ಸನದಿ, ಮಲ್ಲಿಕಾರ್ಜುನ ಪಾಟೀಲ, ಮಾಹಾಲಿಂಗ ರಣಧೀರ, ನಿಂಗಪ್ಪಾ ಪಾಟೀಲ ಉಪಸ್ಥಿತರಿದ್ದರು.