ಬೆಳಗಾವಿ

ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ಮುಕ್ತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ

ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ಮುಕ್ತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ


          ಸವದತ್ತಿ   06: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ಮುಕ್ತರಾಗಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಕರೆ ನೀಡಿದರು. ಸ್ಥಳೀಯ   ಜಿ. ಜಿ. ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿಶೇಷ ವಿಕಲಚೇತನ ಹಾಗೂ ಇತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಬಾಲ ವಿಕಾಸ ಅಕಾಡೆಮಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಅಂಗವಾಗಿದ್ದು, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಪಾಲಕರು ಮತ್ತು ವಿದ್ಯಾರ್ಥಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿಡಿಪಿಓ ಅಮೃತ ಸಾಣಿಕೊಪ್ಪ ಅವರು, ಮಹಿಳೆಯರು ಮತ್ತು ಮಕ್ಕಳ ಸಾರ್ವತ್ರಿಕ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 

             ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಪೋಷಣೆಗಾಗಿ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಪ್ರತಿಯೊಂದು ಯೋಜನೆಯು ತಳಮಟ್ಟದ ಜನರನ್ನು ತಲುಪುವಂತೆ ಮಾಡುವುದು ಅಧಿಕಾರಿಗಳಷ್ಟೇ ಅಲ್ಲದೆ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಆರ್‌. ಪಿ. ಕೌಜಲಗಿ ಮಾತನಾಡಿ, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪಲು ಎಲ್ಲ ಇಲಾಖೆಗಳ ಸಮನ್ವಯ ಅತ್ಯಗತ್ಯ. ವಿದ್ಯಾರ್ಥಿಗಳು ಮತ್ತು ಪಾಲಕರು ಈ ಯೋಜನೆಗಳನ್ನು ಬಳಸಿಕೊಂಡು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳೆಯಬೇಕು ಎಂದು ಆಶಿಸಿದರು.

          ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮಾಮಾನಿ ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಾನಂದ ಹಾಲ್ಲೊಳ್ಳಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ. ಎನ್‌. ಕರಡಿಗುಡ್ಡ, ಕಾಲೇಜಿನ ಉಪನ್ಯಾಸಕರಾದ ಸಿದ್ದಪ್ಪ ಜೋಗಿ, ಮಂಜುಳಾ ತೇಗೂರ ಹಾಗೂ ಉಮಾದೇವಿ ಎಮ್‌. ಅವರು ಸರ್ಕಾರದ ವಿವಿಧ ಯೋಜನೆಗಳು, ಬಾಲ್ಯ ವಿವಾಹ ನಿಷೇಧ, ಬಾಲ ಅಪರಾಧ ತಡೆ ಹಾಗೂ ಮೂಢನಂಬಿಕೆ ನಿರ್ಮೂಲನೆ ಮುಂತಾದ ವಿಷಯಗಳ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಎಸ್‌. ಬಿ. ಕಿವಡಿ, ಶ್ರೀದೇವಿ ಹಂಜೆ, ಐ. ಎಂ. ಅಂಬಿ, ಶಿಲ್ಪಾ ಪೂಜಾರಿ, ಸೌಜನ್ಯ ಕುಲಕರ್ಣಿ, ಎಸಿಡಿಪಿಓ ಚೇತನಾ ಹಳ್ಳಿ, ಇಲಾಖೆಯ ಕಚೇರಿ ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ