ಬ್ರಾಹ್ಮಣ ಸಮುದಾಯ ಮತ್ತು ಅರ್ಚಕರ ವಿರುದ್ಧದ ಅವಹೇಳನ ಸಹಿಸುವುದಿಲ್ಲ: ಸಂಜಯ ಪಾಟೀಲ
ಲೋಕದರ್ಶನ ವರದಿ
ಬೆಳಗಾವಿ 05: ಜಾತಿ ನಿಂದನೆ ಪ್ರಗತಿಪರತೆಯ ಮಾನದಂಡವಲ್ಲ. ಬ್ರಾಹ್ಮಣ ಸಮುದಾಯ ಹಾಗೂ ಅರ್ಚಕರ ಹೆಸರಿನಲ್ಲಿ ಹಿಂದೂಗಳನ್ನು ಅವಹೇಳನ ಮಾಡುವುದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ, ಮಾಜಿ ಶಾಸಕ ಸಂಜಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಹಾಗೂ ದೇವಸ್ಥಾನಗಳ ಅರ್ಚಕರ ಕುರಿತು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರಗತಿಪರತೆ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು ಅವಮಾನಿಸುವುದು ಯಾವ ರೀತಿಯ ವೈಚಾರಿಕತೆ ಎಂಬುದನ್ನು ನೇಹಾ ಬೋರಾ ಸ್ಪಷ್ಟಪಡಿಸಬೇಕು.
ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ಗಂಭೀರ ಸಮಸ್ಯೆಯಾಗಿವೆ. ಇಂತಹ ಅಪರಾಧ ಎಸಗುವವರು ಯಾವುದೇ ಜಾತಿ, ಧರ್ಮ ಅಥವಾ ವರ್ಗಕ್ಕೆ ಸೇರಿದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು
ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲ ವ್ಯಕ್ತಿಗಳ ತಪ್ಪುಗಳನ್ನು ಇಡೀ ಬ್ರಾಹ್ಮಣ ಸಮುದಾಯದ ತಲೆಗೆ ಕಟ್ಟುವ ಮನೋಭಾವ ಅಪಾಯಕಾರಿ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು; ಅದಕ್ಕಾಗಿ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಬ್ರಾಹ್ಮಣ ಸಮುದಾಯದ ಇತಿಹಾಸ, ಜ್ಞಾನ ಪರಂಪರೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೀಡಿರುವ ಕೊಡುಗೆಯನ್ನು ಅರಿಯದೆ ಮಾತನಾಡುವುದು ಅಜ್ಞಾನವೋ ಅಥವಾ ಉದ್ದೇಶಪೂರ್ವಕ ದ್ವೇಷದ ರಾಜಕಾರಣವೋ ಎಂಬ ಅನುಮಾನ ಮೂಡಿಸುತ್ತದೆ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂಬ ಕಾರಣಕ್ಕೆ ಜಾತಿಯ ಆಧಾರದಲ್ಲಿ ಯಾರನ್ನಾದರೂ ಅವಮಾನಿಸುವ ಪರವಾನಗಿ ನೀಡಿಲ್ಲ. ಇತರ ಸಮುದಾಯಗಳ ಗೌರವ ಮತ್ತು ಸ್ವಾಭಿಮಾನವನ್ನು ಕಾಪಾಡುವುದೂ ಸಂವಿಧಾನಾತ್ಮಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.
ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸುವ ನೈತಿಕ ಹಕ್ಕು ಎಲ್ಲರಿಗೂ ಇದೆ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಬ್ರಾಹ್ಮಣ ಸಮುದಾಯ ಹಾಗೂ ಅರ್ಚಕ ವರ್ಗದ ವಿರುದ್ಧ ದ್ವೇಷ ಹರಡುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
ನೇಹಾ ಬೋರಾ ಅವರಿಗೆ ನಿಜವಾಗಿಯೂ ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದ್ದರೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಹೋರಾಡಲಿ. ಅದನ್ನು ಬಿಟ್ಟು ಜಾತಿ ಆಧಾರಿತ ಅವಹೇಳನದ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಎಂದು ಹೇಳಿದರು.
ಶತಮಾನಗಳಿಂದ ಜಾತಿ ಸಂಘರ್ಷಗಳನ್ನು ಕಡಿಮೆ ಮಾಡಿ, ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕಾದ ಸಂದರ್ಭದಲ್ಲಿ ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳು ಸಾಮಾಜಿಕ ಒಗ್ಗಟ್ಟನ್ನು ಹಾಳುಮಾಡುತ್ತವೆ.
ಆದ್ದರಿಂದ ನೇಹಾ ಬೋರಾ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಹೇಳಿಕೆ ವಿರುದ್ಧ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.