ಅಸ್ಪೃಶ್ಯತೆ ನಿವಾರಣೆಯಲ್ಲಿ ಪೇಜಾವರ ಶ್ರೀಗಳ ಬದ್ಧತೆ ಅಪಾರ: ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ 05: ಅಸ್ಪೃಶ್ಯತೆ ನಿವಾರಣೆ ಹಾಗೂ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಮೂಡಿಸುವ ಕಾರ್ಯದಲ್ಲಿ ಪೇಜಾವರ ಶ್ರೀಗಳು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ವಿಜಯಪುರ ನಗರದ ಸಮಸ್ತ ಭಕ್ತಾದಿಗಳ ವತಿಯಿಂದ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಕನಸಾಗಿತ್ತು. ಇಂದು ಆ ಕನಸು ನನಸಾಗಿದೆ. ಪ್ರಸ್ತುತ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಶ್ರೀರಾಮ ಮಂದಿರ ಟ್ರಸ್ಟ್ನ ಧರ್ಮದರ್ಶಿಗಳಾಗಿ ಶ್ರದ್ಧಾ-ಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ವಿದ್ಯಾರ್ಥಿ ಜೀವನದಿಂದಲೇ ಶ್ರೀಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ವಿಜಯಪುರದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಭಕ್ತರ ಪರವಾಗಿ ಗುರುಗಳಲ್ಲಿ ಮನವಿ ಮಾಡಿದ್ದೆ. ಅದನ್ನು ಮನ್ನಿಸಿ ಮಂದಿರ ನಿರ್ಮಾಣಕ್ಕೆ ಆಶೀರ್ವದಿಸಿದ್ದಾರೆ ಎಂದು ಸ್ಮರಿಸಿದರು.
ಪ್ರಸ್ತುತ ಶ್ರೀಗಳು ಆಧುನಿಕ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಸುಮಾರು 7 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಕ್ಕೆ ಹೆಚ್ಚಿನ ಅನುದಾನ ಹಾಗೂ ದೇಣಿಗೆ ಕೊಡಿಸುವ ಮೂಲಕ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಹಿಂದುತ್ವದ ಪ್ರತಿಪಾದನೆಯಲ್ಲಿ ಶ್ರೀಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.ನ್ಯಾಯವಿದ್ದಲ್ಲಿ ಗಟ್ಟಿತನವಿರುತ್ತದೆ: ಪೇಜಾವರ ಶ್ರೀಬಳಿಕ ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲುವ ಗುಣ ಬಸನಗೌಡ ಪಾಟೀಲ ಯತ್ನಾಳ ಅವರಲ್ಲಿದೆ. ಅವರು ಸದಾ ಜನಪರವಾಗಿ ಧ್ವನಿ ಎತ್ತುತ್ತಾರೆ.
ನ್ಯಾಯದ ಪರವಾದ ಅವರ ಗಟ್ಟಿತನಕ್ಕೆ ಬೆಂಬಲ ದೊರೆಯುತ್ತದೆ ಎಂದರು.1964ರಲ್ಲಿಯೇ ವಿಜಯಪುರದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಿದ್ದು, ತಾವು ಜನ್ಮವೆತ್ತಿದ ವರ್ಷವೂ ಅದೇ ಆಗಿದೆ ಎಂದು ಸ್ಮರಿಸಿದರು. ಹಿಂದಿನ ಗುರುಗಳು ದೂರದೃಷ್ಟಿಯಿಂದ ಈ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾಗಿದ್ದರು. ಇದೀಗ ಅದನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು 7 ಕೋಟಿ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ವಿಜಯಪುರದ ಜನತೆ ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶ್ರೀಮಠವು ಜನರಲ್ಲಿ ಶ್ರದ್ಧೆ, ಭಕ್ತಿ ಹಾಗೂ ಉತ್ತಮ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.ಶ್ರೀಮಠ ಮತ್ತು ವಿಜಯಪುರಕ್ಕೆ ಅವಿನಾಭಾವ ಸಂಬಂಧಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ದೇಶಾದ್ಯಂತ ಪೇಜಾವರ ಮಠದ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಸಮಸ್ತ ಹಿಂದೂ ಸಮಾಜಕ್ಕೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಉತ್ತಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬೆಳೆಸುವಲ್ಲಿ ಶ್ರೀಮಠದ ಯತಿಗಳ ಕೊಡುಗೆ ಅಪಾರವಾಗಿದೆ ಎಂದರು.ವಿಜಯಪುರ ಜಿಲ್ಲೆಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದಿನ ಗುರುಗಳು ಜಿಲ್ಲೆಯನ್ನು ದತ್ತು ಪಡೆದು ಬರಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಿ ಸರ್ಕಾರದೊಂದಿಗೆ ಕೈಜೋಡಿಸಿದ್ದರು.