ಬೆಳಗಾವಿ

ದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಅತ್ಯಂತ ಮುಖ್ಯ: ಡಾ. ಸುನಿಲ್ ಎಸ್‌. ಜಾಲಾಪುರೆ

ದೇಶದ ಅಭಿವೃದ್ಧಿಯಲ್ಲಿ ಯುವಕರ ಸಹಭಾಗಿತ್ವ ಅತ್ಯಂತ ಮುಖ್ಯ: ಡಾ. ಸುನಿಲ್ ಎಸ್‌. ಜಾಲಾಪುರೆ
The participation of youth in the country's development is of utmost importance: Dr. Sunil S. Jalap

ಲೋಕದರ್ಶನ ವರದಿ 

         ಬೆಳಗಾವಿ 05: ದೇಶದ ಅಭಿವೃದ್ಧಿ ಹಾಗೂ ಬದಲಾವಣೆಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವ ಸಂಸತ್ ಕಾರ್ಯಕ್ರಮವು ಯುವಜನರಲ್ಲಿ ಸಾರ್ವಜನಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದರ ಜತೆಗೆ, ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲರಾದ ಡಾ. ಸುನಿಲ್ ಎಸ್‌. ಜಾಲಾಪುರೆ ಹೇಳಿದರು.

         ಬಸವನಕುಡಚಿಯ ಕೆಎಲ್‌ಇ ವಿಶ್ವವಿದ್ಯಾಲಯದ ಕೆಎಲ್‌ಇ ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಸಹಯೋಗದೊಂದಿಗೆ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಮೈ ಭಾರತ ಕೇಂದ್ರ, ಬೆಳಗಾವಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ 'ವಿಕ್ಷಿತ್ ಭಾರತ ಯುವ ಸಂಸತ್‌-2026' ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಯುವಜನರ ಸಂಖ್ಯೆ ಹಾಗೂ ಮಾನವ ಸಂಪನ್ಮೂಲ ಅಪಾರವಾಗಿದ್ದು, ದೇಶದ ಪ್ರಗತಿಗೆ ಯುವ ಸಮುದಾಯದ ಕೊಡುಗೆ ಅನನ್ಯವಾಗಿದೆ.                 ಯುವಕರಲ್ಲಿ ದೇಶದ ಬದಲಾವಣೆಗಳ ಕುರಿತು ಚಿಂತಿಸುವ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿದೆ. ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವದ ಗುಣಗಳು ಮತ್ತು ರಾಷ್ಟ್ರ ನಿರ್ಮಾಣದ ಜವಾಬ್ದಾರಿಯ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು. 


ಸುದ್ದಿ ಓದಿ