ನವದೆಹಲಿಯ ರಾಷ್ಟ್ರೀಯ ಪಥಸಂಚಲನದಲ್ಲಿ ಕನಕದಾಸರ ಸ್ತಬ್ಧಚಿತ್ರವನ್ನು ಕರ್ನಾಟಕ ರಾಜ್ಯದಿಂದ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು : ರವಿ ದಂಡಿನ
ಗದಗ 07: ಭಾರತದ ಗಣರಾಜ್ಯೋತ್ಸವವು ನಮ್ಮ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ರಾಷ್ಟ್ರೀಯ ಏಕತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಮಹತ್ವದ ರಾಷ್ಟ್ರೀಯ ಆಚರಣೆಯಾಗಿದೆ. ಪ್ರತಿವರ್ಷ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ರಾಷ್ಟ್ರೀಯ ಪಥಸಂಚಲನದಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಆಯಾ ರಾಜ್ಯಗಳ ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಪರಂಪರೆಯನ್ನು ದೇಶದ ಮುಂದೆ ಅನಾವರಣಗೊಳಿಸುತ್ತವೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕದ ಭಕ್ತಿ ಪರಂಪರೆ, ಸಮಾನತೆಯ ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ದಾಸಶ್ರೇಷ್ಠ ಕನಕದಾಸರ ಸ್ತಬ್ಧಚಿತ್ರವನ್ನು ಕರ್ನಾಟಕದ ಸ್ತಬ್ಧಚಿತ್ರವಾಗಿ ನವದೆಹಲಿಯ ಮುಂದಿನ ವರ್ಷ 2027 ರ 2 ಜನೇವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಆಹಾರ ನಿಗಮದ ರಾಜ್ಯ ಸದಸ್ಯ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ ಅವರು ಆಗ್ರಹಿಸಿದ್ದಾರೆ.
ಅಸಮಾನತೆಯ ಘಾಟು ಹೆಚ್ಚಿರುವ ಕಾಲದಲ್ಲಿ ಕನಕದಾಸರು 15 ನೇ ಶತಮಾನದಲ್ಲಿ ಶೂದ್ರ ವರ್ಗದಿಂದ ಬಂದು, ತಮ್ಮಲ್ಲಿನ ವಿದ್ವತ್ತು. ಅಧ್ಯಾತ್ಮ ಗುಣದಿಂದ ಸಮಾಜವನ್ನು ಪಾರಮಾರ್ಥಿಕದತ್ತ ನಡೆಸಲು ಪ್ರಯತ್ನಿಸಿದವರಾಗಿದ್ದಾರೆ. ವ್ಯಾಸರಾಯರ ನೆಚ್ಚಿನ ಶಿಷ್ಯರಾದ ಕನಕದಾಸರು ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಕುಲ-ಜಾತಿ-ಪ್ರದೇಶಗಳ ಬದ್ದತೆಗೆ ಸಿಲುಕದ ಕನಕದಾಸರ ಪ್ರಗಲ್ಸ ವಿಚಾರಧಾರೆಗಳು ಜಾಗತೀಕರಣ ಹೊಸ ಹೊಸ ಶೋಧಗಳ ಅನ್ವೇಷಣೆಗಳ ಭರದಲ್ಲಿ ನಮ್ಮ ಸಂಸ್ಕೃತಿ-ಪರಂಪರೆಯಿಂದ ನಾವು ದೂರವಾಗುತ್ತಿರುವ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾದಂಥವುಗಳಾಗಿವೆ.
ವಿಜಯನಗರ ಅರಸರ ಆಳ್ವಿಕೆಯಲ್ಲಿ ಸುತ್ತು ಹಳ್ಳಿಯ ಗೌಡಿಕೆಯನ್ನು ಹೊಂದಿದ್ದ ತಿಮ್ಮಪ್ಪನು ಭೂಮಿಯನ್ನು ಅಗೆಸುತ್ತಿದ್ದಾಗ ಚಿನ್ನದ ನಿಕ್ಷೇಪ ದೊರೆತು ಕನಕನಾದ. ಸಾಲುದಕ್ಕೆ ಆ ಎಲ್ಲ ಚಿನ್ನವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದೇ ಬಡವರಿಗೆ ಹಂಚುತ್ತಾ ಗುಡಿ ಗುಂಡಾರಗಳನ್ನು ಕಟ್ಟಲು ಉಪಯೋಗಿಸಿದನು ಹಾಗೂ ಕಾಗಿನೆಲೆಯಲ್ಲಿ ಆದಿಕೇಶವ ದೇವಾಲಯವನ್ನು ಜೀರ್ಣೋದ್ಧಾರವನ್ನು ಮಾಡಿದನು. ಕೆರೆ-ಕಟ್ಟೆಗಳನ್ನು ಕಟ್ಟಿಸಿದರ ಬಗೆಗೂ ಕುರುಹುಗಳಿವೆ. ಸಾಹಿತ್ಯದಲ್ಲಿ ಮೇರು ಸಾಧನೆಯನ್ನು ಮಾಡಿದವರಾಗಿದ್ದಾರೆ.
ನಳಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ನೃಸಿಂಹಸ್ತವ ಕಾವ್ಯ ಕೃತಿಗಳು. ಕೀರ್ತನೆಗಳು, ಮುಂಡಿಗೆಗಳು, ಉಗಾಭೋಗಗಳನ್ನು ರಚಿಸಿ, ಎಂದೆಂದಿಗೂ ಸ್ಮರಣೆಯಲ್ಲಿ ಉಳಿಯುವವರಾಗಿದ್ದಾರೆ. ಆದ್ದರಿಂದ ಕನಕದಾಸರ ಸ್ಥಭ್ರ ಚಿತ್ರಗಳು ಜಾಗತಿಕವಾಗಿ ಪ್ರಚೂರವಾಗಬೇಕಾದದ್ದು ತುಂಬಾ ಮುಖ್ಯವಾಗಿದೆ. ಇದು ಕೇವಲ ಒಬ್ಬ ಸಂತಕವಿಗೆ ಸಲ್ಲಿಸುವ ಗೌರವವಲ್ಲ: ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಭಕ್ತಿ ಪರಂಪರೆ ಮತ್ತು ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ಇಡೀ ರಾಷ್ಟ್ರಕ್ಕೆ ಪರಿಚಯಿಸುವ ಸಾರ್ಥಕ ಪ್ರಯತ್ನವೂ ಆಗಿರುತ್ತದೆ ಎಂದು ರವಿ ದಂಡಿನ ತಿಳಿಸಿದ್ದಾರೆ.