ಅಧಿಕೃತ ಬಿಡುಗಡೆಗೂ ಮುನ್ನ 250 ಮಾಧ್ಯಮ ಪ್ರತಿನಿಧಿಗಳಿಗೆ ‘ಮಾತೃಭೂಮಿ’ ಚಿತ್ರದ ಟ್ರೇಲರ್ ಪ್ರದರ್ಶಿಸಿದ ಸಲ್ಮಾನ್ ಖಾನ್
ಮುಂಬೈ, ನ. 6 : ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತಮ್ಮ ಬಹುನಿರೀಕ್ಷಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಟ್ರೇಲರ್ ಅನ್ನು ಅಧಿಕೃತ ಬಿಡುಗಡೆಗೂ ಮುನ್ನ ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 250 ಮಾಧ್ಯಮ ಪ್ರತಿನಿಧಿಗಳಿಗೆ ಪ್ರದರ್ಶಿಸಿದರು.
ದೇಶಭಕ್ತಿ, ತ್ಯಾಗ ಹಾಗೂ ಯುದ್ಧದ ಸಂದರ್ಭದಲ್ಲಿ ಮಾನವೀಯ ಭಾವನೆಗಳ ಮಹತ್ವವನ್ನು ಬಿಂಬಿಸುವ ಈ ಚಿತ್ರವು ಟೀಸರ್ ಮತ್ತು ಪೋಸ್ಟರ್ ಬಿಡುಗಡೆಯಾದಾಗಿನಿಂದಲೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ವಿಶೇಷ ಪ್ರದರ್ಶನದಲ್ಲಿ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್ ಅವರ ಪ್ರಭಾವಶಾಲಿ ಲುಕ್ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ, ನಟಿ ಚಿತ್ರಾಂಗದಾ ಸಿಂಗ್ ಅವರೊಂದಿಗಿನ ಸಲ್ಮಾನ್ ಖಾನ್ ಅವರ ತೆರೆಯ ಮೇಲಿನ ಜೋಡಿಯೂ ಪ್ರಶಂಸೆ ಗಳಿಸಿತು. ಟ್ರೇಲರ್ನ ಹಿನ್ನೆಲೆ ಸಂಗೀತ ಹಾಗೂ ಹಾಡುಗಳ ಕೆಲವು ದೃಶ್ಯಗಳು ಮಾಧ್ಯಮ ಪ್ರತಿನಿಧಿಗಳ ಗಮನ ಸೆಳೆದವು.
ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಟ್ರೇಲರ್ನ ವಿಶೇಷ ಪ್ರದರ್ಶನದ ಬಳಿಕ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಅಧಿಕೃತ ಟ್ರೇಲರ್ ಬಿಡುಗಡೆಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.